
ಬೆಂಗಳೂರು: ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿ ಆವರಣದಲ್ಲಿನ ಸಿವಿಲ್ ಕಾಮಗಾರಿಗಳಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ ಮೂವರು ಎಂಜಿನಿಯರ್‍ಗಳು, ಖಾಸಗಿ ಗುತ್ತಿಗೆದಾರನ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶನಿವಾರ ದಾಳಿ ನಡೆಸಿದರು.
ಕಾರ್ಯಪಾಲಕ ಎಂಜಿನಿಯರ್ ವೇಣುಗೋಪಾಲ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ.ಆನಂದ್, ಸಹಾಯಕ ಎಂಜಿನಿಯರ್ ಡಿ.ಕೆ ಪುಟ್ಟಸ್ವಾಮಿ ಹಾಗೂ ಗುತ್ತಿಗೆದಾರ ಅನಿಲ್ ಕುಮಾರ್ ಅವರ ಮನೆ ಮೇಲೆ ಹಾಗೂ ಕೆಆರ್ ವೃತ್ತದಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಹಗರಣಕ್ಕೆ ಸಂಬಂಧಿಸಿದಂತೆ ಹಲವು ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಪ್ರಧಾನ ಕಚೇರಿಯಲ್ಲಿ 17 ವಿವಿಧ ಸಿವಿಲ್ ಕಾಮಗಾರಿಗಳಲ್ಲಿ ರು.32.18 ಲಕ್ಷ ಹಗರಣ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಟಿ. ಜೆ ಅಬ್ರಾಹಂ ಅವರು ಮೇ 13ರಂದು ಲೋಕಾಯುಕ್ತರಿಗೆ ದೂರು ನೀಡಿದ್ದರು. ಆರೋಪಿಗಳು ಯಾವುದೇ ಕಾಮಗಾರಿ ಕೈಗೊಳ್ಳದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ರು.32.18 ಲಕ್ಷ ಸಾರ್ವಜನಿಕರ ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ನಡೆದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತರು ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಿಕೊಂಡು ಶನಿವಾರ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೆಲಸ ಮಾಡದೆ ಹಣ ನುಂಗಿದರು: ರು.73 ಲಕ್ಷದ ಕಾಮಗಾರಿಯನ್ನು 17 ತುಂಡು ಗುತ್ತಿಗೆ ಕಾಮಗಾರಿಯನ್ನಾಗಿ ಪರಿವರ್ತಿಸಲಾಗಿತ್ತು. ನಿಯಮದ ಪ್ರಕಾರ ರು.5 ಲಕ್ಷಕ್ಕೂ ಮೇಲ್ಪಟ್ಟು
ಕಾಮಗಾರಿಯನ್ನು ಆನ್‍ಲೈನ್ ಮೂಲಕ ಟೆಂಡರ್ ಆಹ್ವಾನಿಸುವ ಬದಲು ತಮಗೆ ಬೇಕಾದವರಿಗೆ ಕಾಮಗಾರಿ ಗುತ್ತಿಗೆ ಕೊಡಿಸಲು ಈ ರೀತಿ ಯೋಜಿಸಲಾಗಿತ್ತು ಎಂದು ಟಿ.ಜೆ ಅಬ್ರಾಹಂ ಆರೋಪಿಸಿದ್ದಾರೆ. ಹಗರಣದಲ್ಲಿ ಭಾಗಿಯಾಗಿರುವ ಆರೋಪಿ ಎಂಜಿನಿಯರ್ ಡಿ.ಕೆ.ಪುಟ್ಟಸ್ವಾಮಿ ಅವರು ಡಿಜಿ ಕಚೇರಿ ಕಾಮಗಾರಿ ಗುತ್ತಿಗೆಯನ್ನು ಭಾಮೈದ ಅನಿಲ್ ಕುಮಾರ್‍ಗೆ ಸಿಗುವಂತೆ ನೋಡಿಕೊಂಡಿದ್ದರು. ಪೊಲೀಸ್ ಪ್ರಧಾನ ಕಚೇರಿಯಲ್ಲಿ ಒಂದೇ ಒಂದು ರುಪಾಯಿ ಕಾಮಗಾರಿ ನಡೆಸದೆ ಅಲ್ಲಿ ಕೆಲಸ, ಇಲ್ಲಿ ಕೆಲಸ ಎಂದು ಬರೋಬ್ಬರಿ ರು.32.18 ಲಕ್ಷದ ಬಿಲ್ ಮಾಡಿ ಮಾ.31ರೊಳಗೆ ಹಣ ಡ್ರಾ ಮಾಡಿಕೊಳ್ಳಲಾಗಿತ್ತು. ಆದರೆ, ನಾವು ಹಗರಣವನ್ನು ಬಯಲಿಗೆಳೆಯುತ್ತಿದ್ದಂತೆ ರಾತ್ರೋ ರಾತ್ರಿ ಕೆಲಸ ಆರಂಭಿಸಿದ್ದರು.
ಕೆಲಸ ಮಾಡದೇ ಬಿಲ್ ತೆಗೆದುಕೊಂಡಿದ್ದು, ಬಳಿಕ ಬಿಲ್ ಮಾಡಿದ ನಂತರ ಕೆಲಸ ಆರಂಬಿsಸಿರುವ ಸಮಗ್ರ ದಾಖಲೆಗಳು ನಮ್ಮಲ್ಲಿವೆ. ಕರ್ತವ್ಯ ನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿಯೊಬ್ಬರ ಸಂಬಂಧಿ ಕೂಡಾ ಗುತ್ತಿಗೆ ಪಡೆದುಕೊಂಡಿದ್ದಾರೆ. ಈ ಮೂಲಕ ಹಗರಣದಲ್ಲಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್‍ಗಳು ಮಾತ್ರವಲ್ಲದೇ ಐಪಿಎಸ್ ಅಧಿಕಾರಿಗಳು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಟಿ.ಜೆ ಅಬ್ರಾಹಂ ಆರೋಪಿಸಿದ್ದಾರೆ.
ಒಂದೇ ಕೆಲಸಕ್ಕೆ ಮೂರು ಹೆಸರು ಡಿಜಿ ಕಚೇರಿಯಲ್ಲಿ ನಡೆದ ಅವ್ಯವಹಾರ ಹೇಗೆ ನಡೆದಿದೆ ಎಂದರೆ ಒಂದೇ ಸ್ಥಳಕ್ಕೆ ಮೂರು ವಿಭಿನ್ನ ಹೆಸರುಗಳನ್ನು ನೀಡಲಾಗಿದೆ. ಅಷ್ಟಿದ್ದರೂ ನಯಾ ಪೈಸೆಯನ್ನೂ ಕೆಲಸಕ್ಕೆಂದು ಖರ್ಚು ಮಾಡಿಲ್ಲ. ಪೊಲೀಸ್ ಪ್ರಧಾನ ಕಚೇರಿಯಲ್ಲೇ ಈ ರೀತಿ ಹಗರಣವಾದರೆ ಇನ್ನು ಬೇರೆ ಕಡೆ ಗತಿಯೇನು. ತಮ್ಮ ಕಚೇರಿಯಲ್ಲೇ ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ ಅವರ ಕಣ್ಣಿಗೆ ಬೀಳದೆ ಇರುವುದು ಆಶ್ಚರ್ಯ ಮೂಡಿಸಿದೆ ಎಂದು ಅಬ್ರಾಹಂ ಹೇಳಿದರು. ಹಗರಣವನ್ನು ಬಯಲು ಮಾಡಿದ ನಂತರ ಡಿಜಿ ಕಚೇರಿಗೆ ಸಾರ್ವಜನಿಕರ
ಪ್ರವೇಶ ನಿರ್ಬಂಧಿಸಿದ್ದಾರೆ. ಸಾರ್ವಜನಿಕರ ದೂರು-ದುಮ್ಮಾನ ಹೇಳಿಕೊಳ್ಳಲು ಡಿಜಿ ಕಚೇರಿ ಇರುವುದು. ಆದರೆ, ಜನರಿಗೆ ಪ್ರವೇಶ ನಿರ್ಬಂಧಿಸಿರುವುದು ಸರಿಯಲ್ಲ. ಈ ಬಗ್ಗೆ ಹೋರಾಟ ಮಾಡುತ್ತೇನೆ.
- ಟಿ.ಜೆ.ಅಬ್ರಹಾಂ, ಸಾಮಾಜಿಕ ಹೋರಾಟಗಾರ
Advertisement