ಲೈನ್‍ಮೆನ್ ನೇಮಕ ಪ್ರಕ್ರಿಯೆ ಆರಂಭ

ಇಂಧನ ಇಲಾಖೆಯಲ್ಲಿ 27,000 ಲೈನ್‍ಮೆನ್ ಹುದ್ದೆಗಳು ಖಾಲಿ ಇದ್ದು, ಇದೇ ಪ್ರಥಮ ಬಾರಿಗೆ ದೊಡ್ಡ ಪ್ರಮಾಣದ ನೇಮಕ ಪ್ರಕ್ರಿಯೆ ಆರಂಭಿಸಲು ಸರ್ಕಾರ ಮುಂದಾಗಿದೆ...
ಇಂಧನ ಸಚಿವ ಡಿ.ಕೆ.ಶಿವಕುಮಾರ್
ಇಂಧನ ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು: ಇಂಧನ ಇಲಾಖೆಯಲ್ಲಿ 27,000 ಲೈನ್‍ಮೆನ್ ಹುದ್ದೆಗಳು ಖಾಲಿ ಇದ್ದು, ಇದೇ ಪ್ರಥಮ ಬಾರಿಗೆ ದೊಡ್ಡ ಪ್ರಮಾಣದ ನೇಮಕ ಪ್ರಕ್ರಿಯೆ ಆರಂಭಿಸಲು ಸರ್ಕಾರ ಮುಂದಾಗಿದೆ.

ಇಲಾಖೆಯಲ್ಲಿ ತಳಮಟ್ಟದ ಸೇವೆಗೆ ಬೇಕಾದ ಲೈನ್‍ಮೆನ್‍ಗಳ ನೇಮಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ನಂತರ ಎಂಜಿನಿಯರ್‍ಗಳ ನೇಮಕವನ್ನೂ ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಖಾಲಿ ಇರುವ 27,000 ಹುದ್ದೆಗಳಲ್ಲಿ 14,948 ಜೂನ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಈ ಹುದ್ದೆಗಳಿಗೆ ಮೂರು ಹಂತಗಳಲ್ಲಿ ನೇಮಕ ಪ್ರಕ್ರಿಯೆ ನಡೆಯಲಿದ್ದು, ಪ್ರಥಮ ಹಂತದಲ್ಲಿ 8080, ಎರಡನೇ ಹಂತದಲ್ಲಿ 4343 ಮತ್ತು ಮೂರನೇ ಹಂತದಲ್ಲಿ 2131 ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿದೆ. ಈ ಎಲ್ಲಾ ನೇಮಕ ಪ್ರಕ್ರಿಯೆಗಳು ಇನ್ನೊಂದು ತಿಂಗಳಲ್ಲಿ ಪೂರ್ಣವಾಗಲಿದೆ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಎಸ್‍ಎಸ್‍ಎಲ್‍ಸಿ ಅಥವಾ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35ವರ್ಷಗಳ ವಯೋಮಿತಿ
ನೀಡಲಾಗಿದ್ದು, ಪರಿಶಿಷ್ಟರಿಗೆ 40ವರ್ಷಗಳ ಮಿತಿ ನಿಗದಿ ಮಾಡಲಾಗಿದೆ. ಎಲ್ಲಾ ಅಭ್ಯರ್ಥಿಗಳಿಗೂ ಏಕಕಾಲಕ್ಕೆ ಪರೀಕ್ಷೆ ನಡೆಯಲಿದ್ದು, ಕಂಬ ಹತ್ತುವುದು, ಓಡುವುದೂ ಸೇರಿದಂತೆ ದೈಹಿಕ ಪರೀಕ್ಷೆಗಳು ಕಡ್ಡಾಯವಾಗಿರುತ್ತದೆ. ಆದರೆ ಮಹಿಳೆಯರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ. ಏಕೆಂದರೆ ಕಂಬ ಹತ್ತುವುದು ಮಹಿಳೆಯರಿಗೆ ಬೇಡ ಎನ್ನುವ ಕಾರಣಕ್ಕೆ ಮಹಿಳೆಯರಿಗೆ ಇತರ ಹುದ್ದೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

912 ಎಂಜಿನಿಯರ್‍ಗಳ ನೇಮಕ: ಇದೇವೇಳೆ ಇಲಾಖೆಯಲ್ಲಿ ಖಾಲಿ ಇರುವ ಎಂಜಿನೀಯರ್‍ಗಳ ಹುದ್ದೆಗಳನ್ನೂ ಭರ್ತಿ ಮಾಡಲಾಗುತ್ತಿದ್ದು, 413 ಸಹಾಯಕ ಎಂಜಿನಿಯರ್‍ಗಳು, 480 ಕಿರಿಯ ಎಂಜಿನಿಯರ್‍ಗಳು ಹಾಗೂ ಇತರ ಸಹಾಯಕ ಸಿಬ್ಬಂದಿ ಸೇರಿದಂತೆ ಒಟ್ಟು 912 ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭಿಸಲಾಗುತ್ತಿದೆ. ವಿಶೇಷವಾಗಿ ಎಂಜಿನಿಯರ್‍ಗಳ ನೇಮಕವನ್ನು ಇಂಡಿಯನ್ ಇನ್ಸ್‍ಸ್ಟಿಟ್ಯೂಟ್ ಅಫ್ ಮ್ಯಾನೇಜ್‍ಮೆಂಟ್‍ಗೆ ವಹಿಸಲಾಗುತ್ತಿದೆ. ಆಕಾಂಕ್ಷಿಗಳು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೊರ ಹೋಗಬಾರದು ಎಂದು ಅವರು ವಿನಂತಿಸಿದರು.

ಲೋಡ್‍ಶೆಡ್ಡಿಂಗ್ ಇಲ್ಲ: ರಾಜ್ಯದಲ್ಲಿ ಎಲ್ಲಿಯೂ ಲೋಡ್‍ಶೆಡ್ಡಿಂಗ್ ವಿಧಿಸುತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಎಲ್ಲಾದರೂ ವಿದ್ಯುತ್ ಪೂರೈಕೆ ಇಲ್ಲದಿರುವ ಬಗ್ಗೆ ದೂರುಗಳು ಬರುತ್ತಿದ್ದರೆ ಅದಕ್ಕೆ ತಾಂತ್ರಿಕ ಕಾರಣಗಳಿರುತ್ತವೆ. ಯಾವುದೆ ಎಸ್ಕಾಂ ವ್ಯಾಪ್ತಿಯಲ್ಲೂ ಲೋಡ್ ಶೆಡ್ಡಿಂಗ್ ವಿಧಿಸುತ್ತಿಲ್ಲ. ರಾಜ್ಯದ ಜಲಾಶಯಗಳಲ್ಲಿ ಹಿಂದಿನ ವರ್ಷಕ್ಕಿಂತ ಶೇ.10ರಷ್ಟು ಹೆಚ್ಚು ನೀರಿರುವುದರಿಂದ ವಿದ್ಯುತ್ ಉತ್ಪಾದನೆ ವಿಚಾರದಲ್ಲಿ ನಾವು ಬಚಾವ್ ಆಗಿದ್ದೇವೆ. ಹಾಗೊಂದು ವೇಳೆ ವಿದ್ಯುತ್ ಸಮಸ್ಯೆ ಎದುರಾದರೆ ತುರ್ತು ಪರಿಹಾರಕ್ಕೆ ಬೇಕಾಗುತ್ತದೆ ಎಂದು ಟೆಂಡರ್ ಆಹ್ವಾನಿಸಿ ವಿದ್ಯುತ್ ಖರೀದಿಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com