ಟಿಡಿಆರ್ ಬೇಡಿಕೆ ಹೆಚ್ಚಿದರೆ ಆದಾಯ: ವಿಜಯಭಾಸ್ಕರ್

ಮುಂಬೈ ಮಹಾನಗರ ಪಾಲಿಕೆ ಮಾದರಿಯಂತೆ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (ಟಿಡಿಆರ್) ಕಡ್ಡಾಯ ಸೇರಿದಂತೆ ಆದಾಯದ ಮೂಲಗಳನ್ನು ಬಲಪಡಿಸಿದರೆ, ಬಿಬಿಎಂಪಿಯಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಆಡಳಿತಾಧಿಕಾರಿ ಟಿ.ಎಂ. ವಿಜಯಭಾಸ್ಕರ್ ಅಭಿಪ್ರಾಯಪಟ್ಟರು...
ಆಡಳಿತಾಧಿಕಾರಿ ಟಿ.ಎಂ. ವಿಜಯಭಾಸ್ಕರ್
ಆಡಳಿತಾಧಿಕಾರಿ ಟಿ.ಎಂ. ವಿಜಯಭಾಸ್ಕರ್
Updated on

ಬೆಂಗಳೂರು: ಮುಂಬೈ ಮಹಾನಗರ ಪಾಲಿಕೆ ಮಾದರಿಯಂತೆ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (ಟಿಡಿಆರ್) ಕಡ್ಡಾಯ ಸೇರಿದಂತೆ ಆದಾಯದ ಮೂಲಗಳನ್ನು ಬಲಪಡಿಸಿದರೆ, ಬಿಬಿಎಂಪಿಯಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಆಡಳಿತಾಧಿಕಾರಿ ಟಿ.ಎಂ. ವಿಜಯಭಾಸ್ಕರ್ ಅಭಿಪ್ರಾಯಪಟ್ಟರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ ಕೆಸಿಸಿಐ) ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯ ಜನಸಂಖ್ಯೆಗೂ ಬಿಬಿಎಂಪಿ ವ್ಯಾಪ್ತಿಯ ಜನಸಂಖ್ಯೆಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಮುಂಬೈನಲ್ಲಿ ರು.33 ಸಾವಿರ ಕೋಟಿ ಮೊತ್ತದ ಬಜೆಟ್ ಮಂಡಿಸುತ್ತಿದ್ದು, ಬಿಬಿಎಂಪಿಯಲ್ಲಿ ರು.5,400 ಕೋಟಿ ಮೊತ್ತದ ಬಜೆಟ್ ಮಂಡಿಸಲಾಗಿದೆ. ಆದರೆ, ಮುಂಬೈ ಹಾಗೂ ಬಿಬಿಎಂಪಿ ಆದಾಯದ ಮೂಲಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಮುಂಬೈನಲ್ಲಿ ಟಿಡಿಆರ್ ಕಡ್ಡಾಯ ಮಾಡಿದ್ದು, ಕಟ್ಟಡ ನಿರ್ಮಿಸು ವಾಗ ಎರಡನೇ ಬಾರಿಗೂ ಅನುಮತಿ ಪಡೆಯಬೇಕಾಗುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 3.25ರವರೆಗೆ ಮಹಡಿ ನಿರ್ಮಿಸಲು ಟಿಡಿಆರ್ ಪಡೆಯಬೇಕಿಲ್ಲ.

ಮೆಟ್ರೋ ವ್ಯಾಪ್ತಿಯಲ್ಲಿ ಈ ರಿಯಾಯಿತಿ 4ರವರೆಗೂ ಮುಂದುವರಿದಿದೆ. ನಗರದಲ್ಲಿ 10 ಲಕ್ಷ ಟಿಡಿಆರ್ ಬಳಕೆಯಾಗಿಲ್ಲ. ಹೀಗಾಗಿ ಟಿಡಿಆರ್‍ಗೆ ಬೇಡಿಕೆ ಹೆಚ್ಚಿಸಲು ರಿಯಾಯಿತಿ ನೀಡಬಾರದು ಎಂದರು. ಭೂಸ್ವಾಧೀನದ್ದೇ ಸಮಸ್ಯೆ: ಅಭಿವೃದ್ಧಿ ಯೋಜನೆ ರೂಪಿಸುವಾಗ ಭೂಸ್ವಾಧೀನ ಪ್ರಕ್ರಿಯೆ ಸಮಸ್ಯೆಯಾಗಿ ಕಾಡುತ್ತಿದೆ. ರಸ್ತೆ ಅಭಿವೃದ್ಧಿ, ಮೇಲ್ಸೇತುವೆ ನಿರ್ಮಾಣ, ಎಲಿವೇಟೆಡ್ ಕಾರಿಡಾರ್ ಸೇರಿದಂತೆ ಅಭಿವೃದ್ಧಿ ಯೋಜನೆಗಳಿಗೆ ಭೂಸ್ವಾಧೀನ ಮಾಡುವಾಗ ಹೆಚ್ಚಿನ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಯೋಜನೆ ಪೂರ್ಣಗೊಳ್ಳುವುದು ತಡವಾಗುತ್ತಿದೆ. ಇಂತಹ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ಅಧಿಕಾರಿಗಳ ತಂಡ ದೆಹಲಿ, ಕೋಲ್ಕತ್ತಾ, ಮುಂಬೈ, ಚೆನ್ನೈಗೆ ಭೇಟಿ ನೀಡಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ಪ್ರತ್ಯೇಕ ಸ್ಥಳೀಯ ಸಂಸ್ಥೆ ಅಗತ್ಯ: ಅಧಿಕಾರಿಗಳ ತಂಡದ ಅಧ್ಯಯನದ ವರದಿ ಬಗ್ಗೆ ಚರ್ಚಿಸಲು ವಿಭಜನೆಯ ಸದನ ಸಮಿತಿ, ಮುಂದಿನ ವಾರದಲ್ಲಿ ಬಿಬಿಎಂಪಿ ಜೊತೆ ಸಭೆ ನಡೆಸಲಿದೆ. ದೆಹಲಿಯಲ್ಲಿ ಎನ್ ಡಿಎಂಸಿ, ಎಂಸಿಡಿಯಂತಹ ಸ್ಥಳೀಯ ಸಂಸ್ಥೆಗಳಿದ್ದು, ಪಾಲಿಕೆಗೆ ಸಹಕಾರಿಯಾಗಿದೆ. ಮುಂಬೈನಲ್ಲಿ ನವಿ ಮುಂಬೈ ಪ್ರತ್ಯೇಕ ನಗರವಾಗಿ ಬೆಳೆದಿದೆ. ಕೋಲ್ಕತಾದಲ್ಲೂ ಪುರಸಭೆ ಹಾಗೂ ನಗರಸಭೆಗಳನ್ನು ಉಳಿಸಿಕೊಳ್ಳಲಾಗಿದೆ. ಆದರೆ, ಬಿಬಿಎಂಪಿಗೆ 110 ಹೊಸ ಪ್ರದೇಶಗಳನ್ನು ಸೇರಿಸಿರುವುದರಿಂದ ಆಡಳಿತ ಕಷ್ಟಸಾಧ್ಯವಾಗಿದೆ. ಹೊಸ ಪ್ರದೇಶಗಳಿಗೆ ಪ್ರತ್ಯೇಕ ಸ್ಥಳೀಯ ಸಂಸ್ಥೆಗಳನ್ನು ನೀಡಿದರೆ ಆಡಳಿತ ಸುಲಭವಾಗುತ್ತದೆ ಎಂದರು.

ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಡ್ಡಿಯಿಂದಲೇ ರು.1 ಸಾವಿರ ಕೋಟಿ ಆದಾಯ ಬರುತ್ತಿದೆ. ಆದರೆ, ಬಿಬಿಎಂಪಿಯಲ್ಲಿ ರು.3 ಸಾವಿರ ಕೋಟಿ ಸಾಲವೇ ಇದೆ. ರು.1,800 ಕೋಟಿ ಆಸ್ತಿ ತೆರಿಗೆ ಬಿಬಿಎಂಪಿಯಲ್ಲಿ ಸಂಗ್ರಹವಾಗುತ್ತಿದ್ದರೆ, ಮುಂಬೈನಲ್ಲಿ ರು.5,200 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗುತ್ತಿದೆ. ಆದಾಯ ಹೆಚ್ಚಿದಷ್ಟೂ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬಹುದು ಎಂದು ವಿಜಯಭಾಸ್ಕರ್ ತಿಳಿಸಿದರು. ಎಫ್ ಕೆಸಿಸಿಐ ಅಧ್ಯಕ್ಷ ಸಂಪತ್ ರಾಮನ್, ಉಪಾಧ್ಯಕ್ಷ ತಲ್ಲಂ ಆರ್. ದ್ವಾರಕಾನಾಥ್ ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com