
ಬೆಂಗಳೂರು: ವಾಕಿಂಗ್ ತೆರಳುತ್ತಿದ್ದ ಸಚಿವ ಖಮರುಲ್ ಇಸ್ಲಾಂ ಅವರ ಕಚೇರಿ ಸಿಬ್ಬಂದಿಯ ಮೇಲೆ ಬಸವೇಶ್ವರ ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಕಲ್ಲಪ್ಪ ಕರಾದರ ನಡೆಸಿದ ಹಲ್ಲೆ ಪ್ರಕರಣ ಸಂಬಂಧ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ನೀಡುವಂತೆ ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಆದೇಶಿಸಿದ್ದಾರೆ.
ಕಚೇರಿ ಸಿಬ್ಬಂದಿ ಬಿ.ವಿ ಹೇಮಂತ್ ಕುಮಾರ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವ ಖಮರುಲ್ ಇಸ್ಲಾಂ ಅವರು ನಗರ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಅವರಿಗೆ ಜೂ.15ರಂದು ಪತ್ರ ಬರೆದಿದ್ದರು. ಹೇಮತ್ ಕುಮಾರ್ ಅವರು ಜೂ.12ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಜಾಗಿಂಗ್ ಮಾಡಲು ವೃಷಭಾವತಿ ನಗರದ ತಮ್ಮ ಮನೆಯಿಂದ ಬಸವೇಶ್ವರ ನಗರದ ಮಂಕಿ ಪಾರ್ಕಿಗೆ ಪಲ್ಸರ್ ಬೈಕ್‍ನಲ್ಲಿ ಹೊರಟಿದ್ದರು. ಮಾರ್ಗ ಮಧ್ಯೆ ವಿಎಲ್‍ಎಸ್ ಇಂಟರ್‍ನ್ಯಾಷನಲ್ ಶಾಲೆ ಮುಂಭಾಗದಲ್ಲಿ ಗಸ್ತಿನಲ್ಲಿದ್ದ ಇಬ್ಬರು ಪೊಲೀಸ್ ಪೇದೆಗಳು ಹೇಮಂತ್ ಅವರನ್ನು ತಡೆದು ಚಾಲನಾ ಪರವಾನಗಿ ಹಾಗೂ ವಾಹನ ದಾಖಲೆಗಳನ್ನು ಕೇಳಿದ್ದಾರೆ. ಆದರೆ, ತಾವು ಜಾಗಿಂಗ್ ಬಂದಿದ್ದು, ತಮ್ಮ ಪರಿಚಯ ಮಾಡಿಕೊಂಡು ನಂತರ ಠಾಣೆಗೆ ದಾಖಲೆಗಳನ್ನು ತಂದು ತೋರಿಸುವುದಾಗಿ ಸಿಬ್ಬಂದಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಇನ್ಸ್ ಪೆಕ್ಟರ್ ಕಲ್ಲಪ್ಪ, ವಿಚಾರಣೆ ನಡೆಸದ ಅವಾಚ್ಯ ಶಬ್ಧಗಳಿಂದ ನಿಂದಿಸಿ ಏಕಾಏಕಿ ಹೇಮಂತ ಅವರ ಮೇಲೆ ಹಲ್ಲೆ ನಡೆಸಿ ಠಾಣೆಗೆ ಕರೆದೊಯ್ದಿದ್ದಾರೆ. ಆದರೆ. ಬಳಿಕ ಇಬ್ಬರು ಸ್ನೇಹಿತರು ದಾಖಲೆಗಳನ್ನು ತಂದು ತೋರಿಸಿದ ಬಳಿಕ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ನನ್ನ ಕಚೇರಿಯಲ್ಲಿ 2 ವರ್ಷಗಳಿಂದ ಕೆಲಸ ಮಾಡುತ್ತಿರುವ ಹೇಮಂತ್ ಅವರು ಈ ಹಿಂದೆಯು ಸಚಿವರ ಕಚೇರಿಯಲ್ಲಿ ಕೆಲಸ ಮಾಡಿದ ಅನುಭವವಿದ್ದು ಸನ್ನಡತೆ ಹೊಂದಿದ್ದಾರೆ. ತಮ್ಮ ಬಗ್ಗೆ ಪರಿಚಯ ಮಾಡಿಕೊಂಡ ಬಳಿಕವೂ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿರುವುದು ಅಶಸ್ತಿನ ಪರಮಾವಧಿ. ಆದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಇನ್ಸ್ ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಡಾ.ಖಮರುಲ್ ಇಸ್ಲಾಂ ಅವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು.
Advertisement