ಸರ್ಕಾರಕ್ಕೆ ಆಯೋಗದ ನೋಟಿಸ್

ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದ ತನಿಖೆಗೆ ರಚಿಸಲಾಗಿರುವ ನ್ಯಾ. ಕೆಂಪಣ್ಣ ಆಯೋಗದ ವಿಚಾರಣೆ ಆರಂಭವಾಗಿದ್ದು ...
ಅರ್ಕಾವತಿ ಬಡಾವಣೆ ಚಿತ್ರ
ಅರ್ಕಾವತಿ ಬಡಾವಣೆ ಚಿತ್ರ

ಬೆಂಗಳೂರು: ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದ ತನಿಖೆಗೆ ರಚಿಸಲಾಗಿರುವ ನ್ಯಾ. ಕೆಂಪಣ್ಣ ಆಯೋಗದ ವಿಚಾರಣೆ ಆರಂಭವಾಗಿದ್ದು ಪ್ರಕರಣ ಸಂಬಂಧ ಆಯೋಗ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ. ಅಷ್ಟು ಮಾತ್ರವಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್ .ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಅಧಿಕಾರಾವಧಿಯಲ್ಲಿ ನಡೆದ ಡಿನೋಟಿಫಿ ಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪ ಸಲ್ಲಿಸುವಂತೆ ಅರ್ಜಿದಾರರಿಗೂ ನೋಟಿಸ್ ಜಾರಿಗೊಳಿಸಿದೆ. ಪ್ರಕರಣ ಸಂಬಂಧ ಆಯೋಗಕ್ಕೆ 48 ಅರ್ಜಿಗಳು ದಾಖಲಾಗಿದೆ. ಅದರಲ್ಲಿ 24 ಅರ್ಜಿಗಳು ಸರ್ಕಾರದ ಕ್ರಮ ಸಮರ್ಥಿಸಿಕೊಂಡು ದಾಖಲಾದರೆ 24 ಅರ್ಜಿ ಸರ್ಕಾರದ ಕ್ರಮ ಕಾನೂನುಬಾಹಿರ ಎಂದು ಆರೋಪಿಸಿ ಅರ್ಜಿ ದಾಖಲಾಗಿದೆ. ಸರ್ಕಾರ ಮಾಡಿರುವ ಡಿನೋಟಿಫಿಕೇಷನ್ ಕಾನೂನುಬಾಹಿರ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ಬಿಡಿಎ ಹಾಗೂ ಸರ್ಕಾರಕ್ಕೆ ಆಯೋಗ ಸೂಚಿಸಿದ್ದು ವಿಚಾರಣೆ ಜು.4ಕ್ಕೆ ಮುಂದೂಡಲಾಗಿದೆ. ವಿಚಾರಣೆ ವೇಳೆ ಹಾಜರಿದ್ದ ಅಕ್ರಮ ನೋಟಿಫಿಕೇಷನ್ ವಿರುದ್ಧ ದೂರು ನೀಡಿದ್ದ ನಟರಾಜ್ ಶರ್ಮಾ ಪರ ವಕೀಲರು ವಾದ ಮಂಡಿಸಿ, ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಆರಂಭದಿಂದ ಇಲ್ಲಿಯವರೆಗೂ ಸರ್ಕಾರ ಹಲವು ಬಾರಿ ನಕಾಶೆಗಳನ್ನು ಬದಲಾವಣೆ ಮಾಡಿದೆ. ಎಷ್ಟು ಬಾರಿ ಹಾಗೂ ಯಾವ ಕಾರಣಕ್ಕಾಗಿ ನಕಾಶೆಯನ್ನು ಬದಲು ಮಾಡಿದೆ ಎಂಬುದರ ಬಗ್ಗೆ ಸರ್ಕಾರ ಮಾಹಿತಿ ನೀಡಿಲ್ಲ. ಈ ಕುರಿತು ಮಾಹಿತಿ ನೀಡುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಆಯೋಗಕ್ಕೆ ಮನವಿ ಮಾಡಿದರು. ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ವಾದ ಮಂಡಿಸಿ, ಈ ಪ್ರಕರಣ ರಾಜಕೀಯ ಉದ್ದೇಶಕ್ಕಾಗಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವೇದಿಕೆಯಾಗಿ ಬಳಸಿಕೊಳ್ಳಲಿದೆ. ಇದು ಕಾನೂನಿನ ಹೋರಾಟವಾಗಿದ್ದು, ರಾಜಕಾರಣಕ್ಕೆ ಅವಕಾಶ ನೀಡದಂತೆ ಆಯೋಗ ಗಮನ ಹರಿಸಬೇಕು ಎಂದು ವಾದಿಸಿದರು.

 


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com