
ಬೆಂಗಳೂರು: ಕೈಹಿಡಿದ ಪತಿಯೇ ಪತ್ನಿಯನ್ನು ರು.30 ಸಾವಿರಕ್ಕೆ ಮಾಂಸದಂಧೆ ಜಾಲಕ್ಕೆ ಮಾರಾಟ ಮಾಡಿರುವ ಪ್ರಕರಣವನ್ನು ಪತ್ತೆ ಮಾಡಿರುವ ಸಿಸಿಬಿ ಪೊಲೀಸರು, ಜಾಲಕ್ಕೆ ಸಿಲುಕಿ ಎಚ್‍ಐವಿ ಸೋಂಕಿಗೆ ಬಲಿಯಾದ ಮಹಿಳೆಯನ್ನು ರಕ್ಷಿಸಿದ್ದಾರೆ.
ಬರೋಬ್ಬರಿ ಒಂದು ವರ್ಷಗಳ ಕಾಲ ನಿರಂತರವಾಗಿ ಲೈಂಗಿಕ ಶೋಷಣೆ, ಅತ್ಯಾಚಾರಕ್ಕೊಳಗಾದ ಆ ಮಹಿಳೆಗೆ ಕಡೆಗೂ ಗ್ರಾಹಕನೊಬ್ಬನ ನೆರವಿನಿಂದಲೇ ಬಿಡುಗಡೆ ಸಿಕ್ಕಿದೆ. ಸರ್ಕಾರೇತರ ಸಂಸ್ಥೆ (ಎನ್‍ಜಿಓ) ಸಂಸ್ಥೆ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಸುಬ್ರಹ್ಮಣ್ಯನಗರ ಸಮೀಪದ ಗಣಪತಿಪುರ 2ನೇ ಮುಖ್ಯರಸ್ತೆಯಲ್ಲಿರುವ ಮನೆ ಮೇಲೆ ದಾಳಿ ನಡೆಸಿ, ಪತ್ನಿಯನ್ನು ಜಾಲಕ್ಕೆ ಮಾರಾಟ ಮಾಡಿದ್ದ ಪತಿ ನರಸಿಂಹ (35), ಜಾಲ ನಡೆಸುತ್ತಿದ್ದ ಕೃಷ್ಣ (32) ಹಾಗೂ ಐವರು ಗ್ರಾಹಕರನ್ನು ಬಂಧಿಸಿದ್ದಾರೆ.
ತಮಿಳುನಾಡಿನಿಂದ ಬಂದು ತುಮಕೂರು ಜಿಲ್ಲೆ ಅರಸೀಕೆರೆಯಲ್ಲಿ ವಾಸವಿದ್ದ 24 ವರ್ಷದ ಮಹಿಳೆಗೆ ಆರೋಪಿ ನರಸಿಂಹನ ಜತೆ 4 ವರ್ಷದ ಹಿಂದೆ ಮದುವೆಯಾಗಿತ್ತು. ಈತ ನೊಂದ ಮಹಿಳೆಯ ಅಣ್ಣನ ಸ್ನೇಹಿತನಾಗಿದ್ದ. ಒಳ್ಳೆಯವನಂತೆ ಕಂಡಿದ್ದರಿಂದ ಖುದ್ದು ಅಣ್ಣನೆ ತಂಗಿಯನ್ನು ಒಪ್ಪಿಸಿ ಗೆಳೆಯನಿಗೆ ಕೊಟ್ಟು ಮದುವೆ ಮಾಡಿಸಿದ್ದ.
ವೃತ್ತಿಯಲ್ಲಿ ಕಾರು ಚಾಲಕನಾದ ನರಸಿಂಹ ಪತ್ನಿಯನ್ನು ಕರೆದುಕೊಂಡು ಬೆಂಗಳೂರಿಗೆ ಬಂದು ನೆಲೆಸಿದ್ದ. ಮದುವೆಯಾದ 3 ವರ್ಷಕ್ಕೆ ದೇಹದಂಧೆ ಜಾಲ ನಡೆಸುತ್ತಿದ್ದ ಕೃಷ್ಣನಿಗೆ ರು.30 ಸಾವಿರಕ್ಕೆ ಮಾರಾಟ ಮಾಡಿದ್ದ. ಮನೆ ಕೆಲಸಕ್ಕೆ ಕಳುಹಿಸುತ್ತಿರುವುದಾಗಿ ಸುಳ್ಳು ಹೇಳಿದ ಪತಿ, ಕೃಷ್ಣ ನಡೆಸುತ್ತಿದ್ದ ಅನೈತಿಕ ಜಾಲಕ್ಕೆ ಸಿಲುಕಿಸಿ ಪರಾರಿಯಾಗಿದ್ದ. ನಂತರ ಆಕೆಯನ್ನು
ಬಲವಂತವಾಗಿ ದೇಹದಂಧೆಗೆ ದೂಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದೊಂದು ವರ್ಷದಿಂದ ದೇಹವ್ಯಾಪಾರದಲ್ಲಿ ನಲುಗಿದ್ದ ಆಕೆಗೆ ಇತ್ತೀಚೆಗೆ ಸುಸ್ತು ಸೇರಿದಂತೆ ವಿವಿಧ ಸಮಸ್ಯೆಗಳು ಕಾಡಲಾರಂಬಿಸಿದ್ದವು. ತನಗೆ ಎಚ್‍ಐವಿ ಸೋಂಕು ಹರಡಿದೆ ಎನ್ನುವ ಭೀತಿಯಲ್ಲಿದ್ದಳು. ಹೀಗಾಗಿ, ತನ್ನ ಬಳಿ ದೈಹಿಕ ಸುಖಕ್ಕಾಗಿ ಬರುತ್ತಿದ್ದವರ ಬಳಿ ತನಗೆ ಎಚ್‍ಐವಿ ಸೋಂಕು ಇದೆ. ಇಲ್ಲಿಂದ ಬಿಡಿಸಿಕೊಂಡು ಹೋಗಿ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಳು. ಆದರೆ, ಕಾಮಾಂಧರಿಗೆ ಆಕೆಯ ನೋವು ಅರ್ಥವಾಗಿರಲಿಲ್ಲ. ಆದರೆ, ವಾರದ ಹಿಂದೆ ಬಂದ ವ್ಯಕ್ತಿಯ ಬಳಿ ಮಹಿಳೆ, ತನ್ನ ಕಷ್ಟ ಹೇಳಿಕೊಂಡಿದ್ದಳು. ಮಹಿಳೆಯ ಕಣ್ಣಿರಿಗೆ ಕರಗಿದ ಆತ ಎನ್‍ಜಿಓಗೆ ಮಾಹಿತಿ ನೀಡಿದ್ದ. ಗಂಭೀರ ಪ್ರಕರಣವಾದ ಹಿನ್ನೆಲೆಯಲ್ಲಿ ಎನ್‍ಜಿಓ ಸಿಬ್ಬಂದಿ ಸಿಸಿಬಿಗೆ ಮಾಹಿತಿ ನೀಡಿದ್ದರು.
ಗುರುವಾರ ಸುಬ್ರಹ್ಮಣ್ಯಪುರ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ, ಮಹಿಳೆಯ ರಕ್ಷಿಸಿದ್ದಾರೆ.
ಜಾಗ ಬದಲಾಯಿಸುತ್ತಿದ್ದ: ದೇಹದಂಧೆ ಜಾಲ ಹೊಂದಿದ್ದ ಆರೋಪಿ ಕೃಷ್ಣ, ಪೊಲೀಸರಿಗೆ ಸಿಕ್ಕಬೀಳಬಾರದೆಂದು ಎರಡು-ಮೂರು ತಿಂಗಳಿಗೊಮ್ಮೆ ಮನೆ ಬದಲಾಯಿಸುತ್ತಿದ್ದ. ಕುಟುಂಬ ಸದಸ್ಯರ ಜತೆಗೆ ವಾಸವಿರುವುದಾಗಿ ಮನೆ ಬಾಡಿಗೆ ಪಡೆದು ದೇಹದಂಧೆ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ
Advertisement