ಬಯೋಕಾನ್ ದಿಢೀರ್ ತಪಾಸಣೆ

ನಗರದ ಹೊರವಲಯ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಬಯೋಕಾನ್ ಸಂಸ್ಥೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಮಂಗಳವಾರ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದರು...
ಬಯೋಕಾನ್ ದಿಢೀರ್ ತಪಾಸಣೆ (ಸಾಂದರ್ಭಿಕ ಚಿತ್ರ)
ಬಯೋಕಾನ್ ದಿಢೀರ್ ತಪಾಸಣೆ (ಸಾಂದರ್ಭಿಕ ಚಿತ್ರ)
Updated on

ಹೆಬ್ಬಗೋಡಿ: ನಗರದ ಹೊರವಲಯ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಬಯೋಕಾನ್ ಸಂಸ್ಥೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಮಂಗಳವಾರ ದಿಢೀರ್ ಭೇಟಿ
ನೀಡಿ ತಪಾಸಣೆ ನಡೆಸಿದರು.

ಬಯೋಕಾನ್ ಸಂಸ್ಥೆಯ ಘಟಕಗಳಿಂದ ಸಮೀಪದ ಕೆರೆಗಳು ಕಲುಷಿತಗೊಂಡಿವೆ ಹಾಗೂ ಸಂಸ್ಥೆಯು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಮಾಜಿ ವಿಂಗ್ ಕಮಾಂಡರ್ ಜಿ.ಬಿ. ಅತ್ರಿ ಅವರು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ತಪಾಸಣೆ ನಡೆಯಿತು. ಮಂಡಳಿಯ ಪ್ರಾದೇಶಿಕ ಪರಿಸರ ಅಧಿಕಾರಿ ಯತೀಶ್ ಹಾಗೂ ಹಿರಿಯ ಪರಿಸರ ಅಧಿಕಾರಿ ರಮೇಶ್ ಅವರು ಸಂಸ್ಥೆಗೆ ಸೇರಿದ ವಿವಿಧ ವಿಭಾಗಗಳು ಹಾಗೂ ಔಷಧ ತಯಾರಿಕಾ ಘಟಕಗಳಲ್ಲಿ ತಪಾಸಣೆ ನಡೆಸಿ ಮಾಹಿತಿ ಕಲೆ ಹಾಕಿದರು.

ಸಂಸ್ಥೆಯ ಪ್ರಯೋಗಾಲಯ, ಉತ್ಪಾದನಾ ವಿಭಾಗ ಹಾಗೂ ತ್ಯಾಜ್ಯ ವಿಲೇವಾರಿ ಘಟಕಗಳನ್ನು ದೂರುದಾರರಾದ ಅತ್ರಿ ಅವರ ಸಮ್ಮುಖದಲ್ಲೇ ಪರಿಶೀಲಿಸಲಾಯಿತು. ಪರಿಶೀಲನೆ ಬಳಿಕ ಮಾತನಾಡಿದ ಮಂಡಳಿಯ ಅಧಿಕಾರಿ ಜಯಪ್ರಕಾಶ್ ಅವರು ಸಂಸ್ಥೆಗೆ ಸೇರಿದ ಪ್ರತಿ ಘಟಕಗಳನ್ನೂ ತಪಾಸಣೆ ಗೊಳಪಡಿಸಲಾಗಿದೆ. ಪರಿಸರದ ಮೇಲೆ ಸಂಸ್ಥೆ ಪರಿಣಾಮ ಬೀರಿದೆಯೇ ಹಾಗೂ ಇಲ್ಲಿನ ಕೆರೆಗಳು ಕಲುಷಿತಗೊಂಡಿವೆಯೇ ಎಂಬುದರ ಬಗ್ಗೆ ಮಂಡಳಿಯ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ತಪಾಸಣೆಯನ್ನು ಪಾರದರ್ಶಕವಾಗಿ ನಡೆಸಿದ್ದು, ವರದಿ ಬಂದ ನಂತರ ಮಂಡಳಿ ತೀರ್ಮಾನ ಕೈಗೊಳ್ಳಲಿದೆ ಎಂದರು.

ಸಹಕಾರದ ಭರವಸೆ:
ಬಯೋಕಾನ್ ಕಂಪೆನಿಯ ಅಧ್ಯಕ್ಷೆ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಂದಾರ್ ಷಾ ಅವರು ಜಿ.ಬಿ. ಅತ್ರಿ ಹಾಗೂ ಮಂಡಳಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. `ಮಂಡಳಿಯ ಅಧಿಕಾರಿಗಳು ಸಂಸ್ಥೆಯ ಚಟುವಟಿಕೆಗಳ ಬಗ್ಗೆ ನಡೆಸುತ್ತಿರುವ ತಪಾಸಣೆಗೆ ಸಹಕರಿಸಲಾಗುವುದು. ಸಂಸ್ಥೆಯಿಂದ ಕೂಡಲೇ ತಜ್ಞರ ತಂಡವೊಂದನ್ನು ರಚಿಸಿ ಕೆರೆ ಹಾಗೂ ಸುತ್ತಲಿನ ಪರಿಸರದ ಬಗ್ಗೆ ಅಧ್ಯಯನ ನಡೆಸಲಾಗುವುದು. ಕೆರೆಗಳ ಸಂರಕ್ಷಣೆಗೆ ಒತ್ತು ಕೊಡುತ್ತೇವೆ' ಎಂದು ಕಿರಣ್ ಮಜುಂದಾರ್ ಷಾ ಸ್ಪಷ್ಟನೆ ನೀಡಿದರು.

ಮಂಡಳಿ ಅಧಿಕಾರಿಗಳು ಬಯೋಕಾನ್ ಸಂಸ್ಥೆಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಮಂಡಳಿಯ ನಿಯಮಗಳನ್ನು ಸಂಸ್ಥೆ ಪಾಲಿಸುತ್ತಿದೆಯೇ ಎಂಬುದನ್ನು ಅಧಿಕಾರಿಗಳು
ಪರಿಶೀಲಿಸಿದ್ದಾರೆ. 3-4 ದಿನಗಳ ಒಳಗೆ ವರದಿ ಮಂಡಳಿಗೆ ಸಲ್ಲಿಕೆಯಾಗಲಿದೆ.

-ವಿಜಯಕುಮಾರ್
ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com