
ಹುಬ್ಬಳ್ಳಿ: ಭಾರತ ದೇಶ ಅತ್ಯಂತ ತಾಳ್ಮೆ ಹಾಗೂ ಉದಾರತನದ ದೇಶವಾಗಿದ್ದು, ಮುಸ್ಲಿಮರಿಗೆ ಭಾರತಕ್ಕಿಂತ ಸುರಕ್ಷಿತ ಸ್ಥಳ ಬೇರೊಂದಿಲ್ಲ ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಭಾನುವಾರ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ನಿನ್ನೆ ನಡೆದ ಹಿಂದು ಸಮಾವೇಶ ಸಮಾರಂಭದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ಅವರು, ಹಿಂದು ಜನರಲ್ಲಿ ಅತ್ಯಂತ ತಾಳ್ಮೆಯ ಸ್ವಭಾವವಿರುವುದರಿಂದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತ ಶಾಂತಿಯುತ ದೇಶವಾಗಿದೆ. ತಾಳ್ಮೆ ಹಾಗೂ ಶಾಂತಿ ಹೊಂದಿರುವ ಭಾರತ ಮುಸ್ಲಿಮರಿಗೆ ಅತ್ಯಂತ ಸುರಕ್ಷಿತ ಸ್ಥಳವಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮದರ್ ತೆರೇಸಾ ಕುರಿತ ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ನೀಡಿದ ಹೇಳಿಕೆ ಕುರಿತಂತೆ ಪರವಾಗಿ ಮಾತನಾಡಿದ ಅವರು, ಬಡಜನರಿಗೆ ಸಹಾಯ ಮಾಡುವ ನೆಪದಲ್ಲಿ ಒಳ್ಳೆಯ ಹೆಸರು ಪಡೆದು ಮತಾಂತರ ಮಾಡುವುದು ತಪ್ಪು ಎಂದಿದ್ದಾರೆ.
ಕರ್ನಾಟಕದಲ್ಲಿ ವಿಶ್ವ ಹಿಂದು ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ ಅವರನ್ನು ನಿಷೇಧ ಕುರಿತಂತೆ ಕಿಡಿಕಾರಿರುವ ಯೋಗಿ ಅದಿತ್ಯಾ, ತೊಗಾಡಿಯಾ ಅವರನ್ನು ರಾಜ್ಯ ಪ್ರವೇಶ ಮಾಡದಂತೆ ನಿಷೇಧ ಹೇರಿರುವುದು ಕರ್ನಾಟಕ ಸರ್ಕಾರದ ಅತ್ಯಂತ ಕೆಟ್ಟ ನಿರ್ಧಾರ ಎಂದು ಹೇಳಿದ್ದಾರೆ.
Advertisement