ಹಾಡಹಗಲೇ ಕಾಂಗ್ರೆಸ್ ಮುಖಂಡನ ಕಗ್ಗೊಲೆ

ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ರೌಡಿಗಳು ಅಟ್ಟಹಾಸ ಮೆರೆದಿದ್ದು, ಕಾಂಗ್ರೆಸ್ ಮುಖಂಡನೋರ್ವನನ್ನು ಭೀಕರವಾಗಿ ಕೊಂದು ಹಾಕಿದ್ದಾರೆ...
ಹತ್ಯೆಗೀಡಾದ ಕಾಂಗ್ರೆಸ್ ಮುಖಂಡ ನಟರಾಜ್ (ಸಂಗ್ರಹ ಚಿತ್ರ)
ಹತ್ಯೆಗೀಡಾದ ಕಾಂಗ್ರೆಸ್ ಮುಖಂಡ ನಟರಾಜ್ (ಸಂಗ್ರಹ ಚಿತ್ರ)

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ರೌಡಿಗಳು ಅಟ್ಟಹಾಸ ಮೆರೆದಿದ್ದು, ಕಾಂಗ್ರೆಸ್ ಮುಖಂಡನೋರ್ವನನ್ನು ಭೀಕರವಾಗಿ ಕೊಂದು ಹಾಕಿದ್ದಾರೆ.

ನಗರ ಹೊರವಲಯದ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ನಟರಾಜ್(40) ಎಂಬಾತನನ್ನು ದುಷ್ಕರ್ಮಿಗಳನ್ನು ಕೊಚ್ಚಿ ಕೊಂದು ಹಾಕಿದ್ದಾರೆ. ಪೀಣ್ಯ 2ನೇ ಹಂತದ ನಿವಾಸಿಯಾಗಿದ್ದ ನಟರಾಜ್ ತಿಗಳರ ಪಾಳ್ಯದ ಮುಖ್ಯರಸ್ತೆಯಲ್ಲಿ ಮನೆ ನಿರ್ಮಿಸುತ್ತಿದ್ದು, ಇಂದು ಬೆಳಗ್ಗೆ ಮನೆಯಿಂದ ಬಂದು ಸ್ಥಳೀಯ ನಿವಾಸಿ ಕಲ್ಯಾಣಪ್ಪ ಎಂಬುವರ ಜೊತೆ ಮಾತನಾಡುತ್ತಾ ನಿಂತಿದ್ದನು. ಈ ವೇಳೆ ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು ಏಕಾಏಕಿ ನಟರಾಜ್ ಮೇಲೆ ಮಚ್ಚು ಮತ್ತು ಲಾಂಗ್‌ಗಳಿಂದ ದಾಳಿ ಮಾಡಿ ತಲೆ ಹಾಗೂ ಕೈಕಾಲುಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ತೀವ್ರ ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡ ನಟರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಾಳಿ ತಡೆಯಲು ಬಂದ ಸ್ಥಳೀಯ ನಿವಾಸಿ ಕಲ್ಯಾಣಪ್ಪ ಹಾಗೂ ಮತ್ತೊಬ್ಬರ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದಾಕಾಲ ಜನರಿಂದ ತುಂಬಿ ತುಳುಕುತ್ತಿದ್ದ ಪೀಣ್ಯ 2ನೇ ಹಂತದ ಪ್ರದೇಶ ಹತ್ಯೆಯಾಗುತ್ತಿದ್ದಂತೆಯೇ ಜನನಿಭಿಡ ಪ್ರದೇಶವಾಗಿ ಮಾರ್ಪಟ್ಟಿತು. ಅತ್ತ ರೌಡಿಗಳು ನಟರಾಜ್ ಮೇಲೆ ಹಲ್ಲೆ ನಡೆಸುತ್ತಿದ್ದಂತೆಯೇ ಇತ್ತ ಅಲ್ಲಿದ್ದ ಜನರೆಲ್ಲ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದರು.

ಕೊಲೆ ಸುದ್ದಿ ತಿಳಿಯುತ್ತಿದ್ದಂತೆಯೇ ರಾಮನಗರ ಜಿಲ್ಲಾ ಎಸ್ಪಿ ಡಾ.ಚಂದ್ರಗುಪ್ತ, ಡಿವೈಎಸ್ಪಿ ಲಕ್ಷ್ಮಿಗಣೇಶ್, ಮಾಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಯಲಗಯ್ಯ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಶವವನ್ನು ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. ನಟರಾಜ್ ಕೊಲೆ ಯಾವ ಕಾರಣಕ್ಕಾಗಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com