ಕೇಂದ್ರದ ವಿದ್ಯಾರ್ಥಿವೇತನ ಬಳಸಿಕೊಳ್ಳಲು ರಾಜ್ಯ ವಿಫಲ

ವಿದ್ಯಾಸಿರಿ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ವಿಶೇಷ ಉತ್ತೇಜನ ಎಂದು ಹೇಳಿಕೊಳ್ಳುವ ರಾಜ್ಯ ಸರಕಾರ, ಕಳೆದ 2008ರಿಂದೀಚೆಗೆ ಸುಮಾರು 35 ಸಾವಿರಕ್ಕೂ...
ಕೇಂದ್ರದ ವಿದ್ಯಾರ್ಥಿವೇತನ ಬಳಸಿಕೊಳ್ಳಲು ರಾಜ್ಯ ವಿಫಲ

ಬೆಂಗಳೂರು: ವಿದ್ಯಾಸಿರಿ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ವಿಶೇಷ ಉತ್ತೇಜನ ಎಂದು ಹೇಳಿಕೊಳ್ಳುವ ರಾಜ್ಯ ಸರಕಾರ, ಕಳೆದ 2008ರಿಂದೀಚೆಗೆ ಸುಮಾರು 35 ಸಾವಿರಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿ ಸಮೂಹವನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ವಿದ್ಯಾರ್ಥಿ ವೇತನದಿಂದ ವಂಚಿತರನ್ನಾಗಿ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

2008ರಿಂದ 2010ರ ಬ್ಯಾಚುಗಳ ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪಡೆದು ಬಹುತೇಕರು ಕೆಲಸಕ್ಕೂ ಸೇರಿದ್ದಾರೆ. ಆದರೆ, ಅವರಿಗೆಲ್ಲ ಇಂದಿಗೂ ವಿದ್ಯಾರ್ಥಿ ವೇತನ ಸಿಕ್ಕಿಲ್ಲ. ರಾಜ್ಯದ ಅಧಿಕಾರಿಗಳ ಹೊಣೆಗೇಡಿ ಕೃತ್ಯದಿಂದ ಸುಮಾರು ರು.35 ಕೋಟಿಗೂ ಹೆಚ್ಚು ಮೊತ್ತದ ವಿದ್ಯಾರ್ಥಿ ವೇತನ ಹಂಚಿಕೆಯಾಗಿಲ್ಲ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಪಿಯುಸಿ 2ನೇ ವರ್ಷ, ನಂತರದ ಪದವಿ ತರಗತಿಗಳಲ್ಲಿ ಶೇ.80ಕ್ಕೂ ಹೆಚ್ಚು ಅಂಕ ಪಡೆದ ಪ್ರತಿಭಾವಂತರಿಗೆ ವಿದ್ಯಾರ್ಥಿ ವೇತನ ನೀಡುತ್ತದೆ.

ಕರ್ನಾಟಕದಲ್ಲಿ ಪ್ರತಿವರ್ಷ ಸರಾಸರಿ ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗುತ್ತಾರೆ. ಪದವಿ ತರಗತಿಗಳ ಪ್ರತಿ ವಿದ್ಯಾರ್ಥಿಗೆ ರು.10 ಸಾವಿರ ವಿದ್ಯಾರ್ಥಿ ವೇತನ ಲಭ್ಯವಾಗುತ್ತಿದ್ದು, ಅಂತಿಮ ಪದವಿಯ ಅರ್ಹ ವಿದ್ಯಾರ್ಥಿಗಳಿಗೆ ರು.20 ಸಾವಿರ ವಿದ್ಯಾರ್ಥಿ ವೇತನ ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ ಈ ವಿದ್ಯಾರ್ಥಿ ವೇತನದ ವಿತರಣೆ ಹೊಣೆ ಹೊತ್ತ ಪದವಿಪೂರ್ವ ಶಿಕ್ಷಣ ಮಂಡಳಿ ಸಕಾಲದಲ್ಲಿ ವಿದ್ಯಾರ್ಥಿ ವೇತನ ವಿತರಿಸುತ್ತಿಲ್ಲ. 3 ವರ್ಷದ ಪದವಿ ವಿದ್ಯಾರ್ಥಿಗಳು ಎರಡು ಬಾರಿ, ಪದವಿ ಮತ್ತು ಸ್ನಾತಕೋತ್ತರರು- 4, ಎಂಜಿನಿಯರಿಂಗ್- 3, ವೈದ್ಯ ವಿದ್ಯಾರ್ಥಿಗಳು- 4 ಬಾರಿ ನವೀಕರಣ ಪ್ರಕ್ರಿಯೆಗೆ ಒಳಪಡುತ್ತಾರೆ.

2009ರ ನಾಲ್ಕನೇ ನವೀಕರಣ, 2010ರ ಬ್ಯಾಚ್- 3, 2011ರ ಬ್ಯಾಚ್- 2, 2012ರ ಬ್ಯಾಚ್- 1ನೇ ನವೀಕರಣ ಪ್ರಕ್ರಿಯೆ ಇಂದಿಗೂ ಮುಗಿದಿಲ್ಲ. 2010ನೇ ಬ್ಯಾಚಿನ 4ನೇ ನವೀಕರಣ, 2011ರ ಬ್ಯಾಚ್- 3, 2012ರ ಬ್ಯಾಚ್- 2, 2013ರ ಬ್ಯಾಚ್- 1ನೇ ನವೀಕರಣಕ್ಕೆ ಅರ್ಜಿ ಆಹ್ವಾನಿಸಿಲ್ಲ. 2014ರ ಹೊಸ ಬ್ಯಾಚ್‍ಗಾಗಿ ಅರ್ಜಿಗಳ ಆಹ್ವಾನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದರ ಜತೆ 2008, 09, 10, 11, 12 ಮತ್ತು 13ನೇ ಬ್ಯಾಚಿನ ವಿದ್ಯಾರ್ಥಿಗಳ ಬಹುತೇಕ ನವೀಕರಣ ಅರ್ಜಿಗಳು ಅಪೂರ್ಣ ಮಾಹಿತಿಯಿಂದ ಬಾಕಿ ಉಳಿದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com