ಗ್ರಂಥಾಲಯಗಳಿಗೆ ಪತ್ರಿಕೆ ಪೂರೈಕೆ ಸ್ಥಗಿತ

ಗ್ರಂಥಾಲಯಗಳಿಗೆ ನೀಡ ಬೇಕಿರುವ ಉಪಕರಣವನ್ನು ಬಿಬಿಎಂಪಿ ಬಾಕಿ ಉಳಿಸಿಕೊಂಡಿರುವುದರಿಂದ ದಿನಪತ್ರಿಕೆಗಳ ಸರಬರಾಜು ಸ್ಥಗಿತವಾಗಿದೆ...
ಬೆಂಗಳೂರು ಕೇಂದ್ರ ಗ್ರಂಥಾಲಯ
ಬೆಂಗಳೂರು ಕೇಂದ್ರ ಗ್ರಂಥಾಲಯ

ಬೆಂಗಳೂರು: ಗ್ರಂಥಾಲಯಗಳಿಗೆ ನೀಡ ಬೇಕಿರುವ ಉಪಕರಣವನ್ನು ಬಿಬಿಎಂಪಿ ಬಾಕಿ ಉಳಿಸಿಕೊಂಡಿರುವುದರಿಂದ ದಿನಪತ್ರಿಕೆಗಳ ಸರಬರಾಜು ಸ್ಥಗಿತವಾಗಿದೆ.

ನಗರದ 5 ವಲಯಗಳಲ್ಲಿರುವ 175 ಗ್ರಂಥಾಲಯಗಳಲ್ಲಿ ಮಾರ್ಚ್ ಆರಂಭದಲ್ಲೇ ದಿನಪತ್ರಿಕೆ ಸರಬರಾಜು ಸ್ಥಗಿತವಾಗಿದ್ದು, ಪೂರ್ವ ವಲಯದ ಗ್ರಂಥಾಲಯದಲ್ಲಿ ಫೆ..20ರಿಂದಲೇ ನಿಂತುಹೋಗಿದೆ. ಸುಮಾರು 10 ತಿಂಗಳಿಂದ ಪತ್ರಿಕೆ ಏಜೆಂಟರಿಗೆ ಗ್ರಂಥಾಲಯಗಳು ಹಣ ಪಾವತಿ ಮಾಡಿಲ್ಲ. ಪ್ರತಿ ವಲಯದಲ್ಲಿ ಏಜೆಂಟರಿಗೆ ರು.60-70 ಲಕ್ಷ ಹಣ ಪಾವತಿ ಮಾಡಬೇಕಿದೆ. ಹಲವು ಬಾರಿ ಬಾಕಿ ಪಾವತಿಸಲು ಮನವಿ ಮಾಡಿ ಪ್ರಯೋಜನವಾಗದಿದ್ದ ಕಾರಣ ಎಲ್ಲ ವಲಯಗಳ ಏಜೆಂಟರು ಪತ್ರಿಕೆ ಸರಬರಾಜು ನಿಲ್ಲಿಸಿದ್ದಾರೆ.

ಬಿಬಿಎಂಪಿ ಕಳೆದ 5 ವರ್ಷಗಳಿಂದ ರು.223 ಕೋಟಿ ಗ್ರಂಥಾಲಯ ಉಪಕರ ಉಳಿಸಿಕೊಂಡಿದ್ದು, 2014-14 ನೇ ಸಾಲಿನಲ್ಲಿ ಒಂದು ಬಾರಿ ಮಾತ್ರ ಅಂದರೆ, ಮೇ ತಿಂಗಳಲ್ಲಿ ರು.8 ಕೋಟಿ ಕರ ಪಾವತಿಸಿತ್ತು. ನಂತರ ನಿರ್ವಹಣಾ ವೆಚ್ಚಕ್ಕೆ ಹಣವಿಲ್ಲದೆ ಗ್ರಂಥಾಲಯ ಸೊರಗುತ್ತಿದೆ. ಪ್ರತಿ ವರ್ಷ ಆನ್‍ಲೈನ್ ಹರಾಜು ಪ್ರಕ್ರಿಯೆ ಮೂಲಕ ಗುತ್ತಿಗೆ ಪಡೆಯುವ ಏಜೆಂಟರಿಗೆ ನಿಯಮ ಪ್ರಕಾರ ತಿಂಗಳಿಗೊಮ್ಮೆ ಹಣ ಪಾವತಿ ಮಾಡಬೇಕು. ಆದರೆ 10 ತಿಂಗಳು ಹಾಗೂ ಕೆಲವಡೆ ಒಂದು ವರ್ಷಕ್ಕೂ ಹೆಚ್ಚಿನ ಕಾಲ ಬಾಕಿ ಹಣ ಉಳಿಸಿಕೊಳ್ಳಲಾಗಿದೆ.

ಕೆಲವು ಬಾರಿ ಸರ್ಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ನೀಡುವ ಅನುದಾನದಲ್ಲಿ ಹಣ ಪಾವತಿ ಮಾಡಲಾಗುತ್ತಿತ್ತು. ಉಪಕರದಲ್ಲೇ ನಿರ್ವಹಣಾ ವೆಚ್ಚ ಪಾವತಿಸುವ ಗ್ರಂಥಾಲಯಗಳಿಗೆ ಈಗ ಸಂಕಷ್ಟ ಎದುರಾಗಿದೆ. ಪ್ರತಿ ವಲಯಗಳಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಸುಮಾರು 30 ಹೆಸರಿನ ಪತ್ರಿಕೆಗಳು ಗ್ರಂಥಾಲಯಕ್ಕೆ ಲಭ್ಯವಿತ್ತು. ಶಾಖಾ ಗ್ರಂಥಾಲಯ, ಸೇವಾ ಕೇಂದ್ರ, ವಾಚನಾಲಯ, ಅನುದಾನ ಗ್ರಂಥಾಲಯ ಸೇರಿದಂತೆ ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ವಲಯಗಳ 175 ಗ್ರಂಥಾಲಯಗಳಿಗೆ ಹಣ ಪಾವತಿಯಾಗುವವರೆಗೆ ಪತ್ರಿಕೆಗಳು ಬರುವುದು ಅನುಮಾನ.

ಉಪಕರವೇ ಆದಾಯ: ಬಿಬಿಎಂಪಿ ಸಂಗ್ರಹಿಸುವ ಆಸ್ತಿ ತೆರಿಗೆಯಲ್ಲಿ ಶೇ.6 ರಷ್ಟು ಮೊತ್ತ ಗ್ರಂಥಾಲಯಕ್ಕೆ ನೀಡಬೇಕು. ಇದನ್ನು ಪಾವತಿಸುವಾಗ ಸಂಗ್ರಹಣಾ ವೆಚ್ಚವೆಂದು ಮತ್ತೆ ಶೇ.10 ಮೊತ್ತ ಕಡಿತಗೊಳಿಸಲಾಗುತ್ತದೆ. ಬಿಬಿಎಂಪಿಯಲ್ಲಿ 2012-13ರಲ್ಲಿ ರು.1,358 ಕೋಟಿ, 2013-14ರಲ್ಲಿ ರು.1,323 ಕೋಟಿ ಹಾಗೂ 2014-15 ನೇ ಸಾಲಿನಲ್ಲಿ  ರು.1,120 ಕೋಟಿಗಿಂತಲೂ ಅಧಿಕ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಆದರೆ ಈ ಸಾಲಿನಲ್ಲಿ ಕೆಲವು ಬಾರಿ ಮಾತ್ರ ಗ್ರಂಥಾಲಯಕ್ಕೆ ಪಾವತಿಯಾಗಿದೆ. ಪುಸ್ತಕ ಖರೀದಿ, ವಿದ್ಯುತ್, ನೀರು, ಕಟ್ಟಡ ಬಾಡಿಗೆ ಸೇರಿದಂತೆ ಎಲ್ಲ ವೆಚ್ಚವನ್ನೂ ಇದೇ ಹಣದಲ್ಲಿ ಪಾವತಿ ಮಾಡಬೇಕು. ಕೇಂದ್ರ ಹಾಗೂ ದಕ್ಷಿಣ ವಲಯದಲ್ಲಿ ರು.60 ಲಕ್ಷ , ಪಶ್ಚಿಮ ರು.24 ಲಕ್ಷ, ಪೂರ್ವದಲ್ಲಿ ರು.60 ಲಕ್ಷ ಹಾಗೂ ಉತ್ತರ ವಲಯದಲ್ಲಿ ರು.60 ಲಕ್ಷ ಪತ್ರಿಕೆಗಳ ಬಾಕಿ ಹಣ ಪಾವತಿಸಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com