ಸಿದ್ದರಾಮಯ್ಯ ಪರ ದಲಿತರ ಬ್ಯಾಟಿಂಗ್
ಬೆಂಗಳೂರು: ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕು ಎಂದು ಹೋರಾಟ ಮಾಡುತ್ತಿರುವ ದಲಿತ ಮುಖಂಡರ ವಿರುದ್ಧ ಮತ್ತೊಂದು ದಲಿತ ಮುಖಂಡರ ಸಮೂಹ ಆಕ್ಷೇಪ ವ್ಯಕ್ತಪಡಿಸಿದೆ.
ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾಯಿಸಬಾರದು ಎಂದು ಮುಖಂಡರ ಸಭೆಯ ಆಗ್ರಹಿಸಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಕೂಡಲೇ ದಲಿತರ ಸಾಲಮನ್ನಾ ಮಾಡಿದ್ದಾರೆ. ಎಸ್‍ಸಿಎಸ್‍ಟಿಗೆ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗಳಿಗೆ ಉಪಯೋಗಿಸಬಾರದು ಎಂದು ಕಟ್ಟಪ್ಪಣೆ ಮಾಡಿದ್ದಾರೆ. ದಲಿತರೇ ಮುಖ್ಯಮಂತ್ರಿ ಆಗಿದ್ದರೂ ಈ ರೀತಿಯ ಆದೇಶ ಬರುತ್ತಿರಲಿಲ್ಲ.
ಹೀಗಾಗಿ ಅವರನ್ನು ಬದಲಾಯಿಸುವ ಬಗ್ಗೆ ದಲಿತ ಸಂಘಟನೆಯ ಯಾವ ಮುಖಂಡರೂ ಮಾತನಾಡಬಾರದು ಎಂದು ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ದಲಿತರೆಲ್ಲ ಒಂದುಗೂಡಿದ್ದಾರೆ, ಇಡೀ ದಲಿತ ಸಮುದಾಯವೇ `ದಲಿತ ಸಿಎಂ' ಬೇಕೆನ್ನುತ್ತಿದೆ ಎಂದು ಬಿಂಬಿಸುತ್ತಿರುವ ಸಂದರ್ಭದಲ್ಲಿ, ದಲಿತ ಸಂಘಟನೆಗಳ ಒಕ್ಕೂಟವೇ ದಲಿತ ಸಿಎಂ ಈಗಿನ ಅಗತ್ಯ ಅಲ್ಲ ಎಂದು ನಿರ್ಣಯಿಸಿರುವುದು ಕುತೂಹಲದ ಘಟ್ಟವಾಗಿದೆ.
ಅಲ್ಲದೆ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ಒತ್ತಾಯಿಸುವ ಮೂಲಕ ದಲಿತರಲ್ಲೇ `ದಲಿತ ಸಿಎಂ' ಹೋರಾಟಕ್ಕೆ ಅಪಸ್ವರ ಇದೆ. ಇದು ಒಕ್ಕೊರಲ ದನಿಯಲ್ಲ ಎಂಬುದು ಸಾಬೀತಾದಂತಾಗಿದೆ. ದಲಿತ ಸಿಎಂ ಬೇಕು ಎನ್ನುವ ಹೋರಾಟ ಮಾಡುವ ಮೂಲಕ ಹಿಂದುಳಿದ ವರ್ಗಗಳು ಹಾಗೂ ದಲಿತರ ನಡುವೆ ಬಿರುಕು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಕುತಂತ್ರ ನಡೆಸುತ್ತಿರುವ ದಲಿತ ಮುಖಂಡರ ವಿರುದ್ಧವೇ ರಾಜ್ಯಾದ್ಯಂತ ಆಂದೋಲನ ನಡೆಸಿ, ದಲಿತರಲ್ಲಿ ಅರಿವು ಮೂಡಿಸುವ ನಿರ್ಣಯವೂ ಇದೇ ಒಕ್ಕೂಟದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಮಾವಳ್ಳಿ ಶಂಕರ್ ಮಾತನಾಡಿ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ದಲಿತರೇ ಆ ಸ್ಥಾನದಲ್ಲಿದ್ದು ದಲಿತರಿಗೆ ಮಾಡಲು ಸಾಧ್ಯವಾಗದ ಕೆಲಸಗಳನ್ನು ಮಾಡಿದ್ದಾರೆ. ಅವರನ್ನು ನಾವೆಲ್ಲ ಬೆಂಬಲಿಸಬೇಕು ಎಂದಿದ್ದಾರೆ.
ಲಕ್ಷ್ಮೀನಾರಾಯಣ ನಾಗವಾರ, ಎನ್. ವೆಂಕಟೇಶ್, ಹರಿಹರ ಆನಂದಸ್ವಾಮಿ, ಕೆ.ಬಿ. ಸಿದ್ದಯ್ಯ, ಮುನಿಸ್ವಾಮಿ, ಇಂಧೂದರ ಹೊನ್ನಾಪುರ ಅವರೂ ಭಾಗವಹಿಸಿದ್ದರು. ಇವರೆಲ್ಲ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ, ವೆಂಕಟಸ್ವಾಮಿ ಹಾಗೂ ಎನ್. ಮೂರ್ತಿ ಅವರ ವಿರುದ್ಧ ಕಿಡಿಕಾರಿದ್ದು, `ದಲಿತ ಸಿಎಂ' ಮಾತೆತ್ತಿರುವುದು ಸರಿಯಲ್ಲ. ಮಲ್ಲಕಾರ್ಜುನ ಖರ್ಗೆ ಹಾಗೂ ಡಾ. ಜಿ. ಪರಮೇಶ್ವರ ಅವರೇ ಈ ಬಗ್ಗೆ ಮಾತನಾಡದಂತೆ ತಾಕೀತು ಮಾಡಿದ್ದರೂ ಅವರು ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಮುಖ್ಯಮಂತ್ರಿಗೆ ಸಾಥ್
ದಲಿತ ಸಿಎಂ ಎಂಬ ಹೋರಾಟದಲ್ಲಿರುವ ಕೆ.ಶಿವರಾಂ, ವೆಂಕಟಸ್ವಾಮಿ, ಎನ್. ಮೂರ್ತಿ ಅವರ ದಲಿತರ ತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿದ್ದ ಬಜೆಟ್ ಸಭೆಗೆ ಭಾಗವಹಿಸದೆ ಅಸಹಕಾರ ತೋರಿದರೆ, ಮತ್ತೊಂದೆಡೆ ಹಿರಿಯ ಸಾಹಿತಿ ಸಿದ್ದಲಿಂಗಯ್ಯ, ಬಿ.ಟಿ. ಲಲಿತಾನಾಯಕ್, ಮಾವಳ್ಳಿ ಶಂಕರ್ ಅವರಿದ್ದ ದಲಿತ ಮುಖಂಡರೆಲ್ಲ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿದ್ದಾರೆ.
ವಿಧಾನಸಭೆಯಲ್ಲಿ ನಡೆದಿದ್ದ ಬಜೆಟ್ ಚರ್ಚೆಯ ಸಭೆಯಲ್ಲಿ ಭಾಗವಹಿಸಿದ್ದ ದಲಿತ ಮುಖಂಡರು 'ನಿಮ್ಮೊಂದಿಗೆ ನಾವು, ನಮ್ಮೊಂದಿಗೆ ನೀವು' ಎಂಬುದಕ್ಕೆ ನಾವು ಒಪ್ಪಿಕೊಂಡಿದ್ದೇವೆ. ಮುಖ್ಯಮಂತ್ರಿಯಾಗಿ ದಲಿತರ ಪರ ಕೆಲಸ ಮಾಡುತ್ತಿದ್ದೀರಿ. ಇದನ್ನು ಮುಂದುವರಿಸಿಕೊಂಡು ಹೋಗಿ. ದೇವರಾಜು ಅರಸು ಅವರ ನಂತರ ದಲಿತರ ಪರ ಯೋಜನೆ ಹಾಗೂ ಕಾಳಜಿಯನ್ನು ನೀವು ಹೊಂದಿದ್ದೀರಿ. ಇದನ್ನು ಮುಂದುವರಿಸಿರಿ. ನಾವೆಲ್ಲ ನಿಮ್ಮೊಂದಿಗಿದ್ದೇವೆ. ದಲಿತರಲ್ಲೇ ಬಿರುಕು ಮೂಡಿಸಲು ಮಾಡುತ್ತಿರುವ ಕುತಂತ್ರ ನಡೆಯುವುದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ದಲಿತ ಮುಖಂಡರು ಭರವಸೆ ನೀಡದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ