ಹೋಗುವುದಾದರೆ ವಿಷಕೊಟ್ಟು ಹೋಗಿ: ಮುನಿಯಪ್ಪಗೆ ಪ್ರತಿಭಟನಾಕಾರರ ಎಚ್ಚರಿಕೆ

ಪ್ರತಿಭಟನೆ ಬಿಟ್ಟು ಹೋಗುವುದಾದರೆ ನಮಗೆಲ್ಲರಿಗೂ ವಿಷಕೊಟ್ಟು ಹೋಗಿ ಎಂದು ಪ್ರತಿಭಟನಾಕಾರರು ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯ್ಯಪ್ಪ ಅವರಿಗೆ...
ಕೆಎಚ್ ಮುನಿಯಪ್ಪ (ಸಂಗ್ರಹ ಚಿತ್ರ)
ಕೆಎಚ್ ಮುನಿಯಪ್ಪ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಪ್ರತಿಭಟನೆ ಬಿಟ್ಟು ಹೋಗುವುದಾದರೆ ನಮಗೆಲ್ಲರಿಗೂ ವಿಷಕೊಟ್ಟು ಹೋಗಿ ಎಂದು ಪ್ರತಿಭಟನಾಕಾರರು ಕೋಲಾರ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯ್ಯಪ್ಪ ಅವರಿಗೆ ಎಚ್ಚರಿಕೆ ನೀಡಿದ ಘಟನೆ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ನಡೆದಿದೆ.

ಬಯಲುಸೀಮೆಯ ವಿವಿಧ ಸಂಘಟನೆಗಳು ಹಮ್ಮಿಕೊಂಡಿರುವ "ಬಯಲುಸೀಮೆ ಬೃಹತ್  ರೈತ ಮಕ್ಕಳ ಸಮಾವೇಶ" ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ನಡೆದಿದ್ದು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರು ಯೋಜನೆ ಸಿದ್ದಪಡಿಸುವಂತೆ ಪ್ರತಿಭಟನೆ ನಡೆಸಲಾಗುತ್ತಿದೆ. ಇದೇ ವೇಳೆ ಡಾ.ಪರಮಶಿವಯ್ಯ ವರದಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು.

ಮುನಿಯಪ್ಪರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು

ಇದೇ ವೇಳೆ ಪ್ರತಿಭಟನಾ ಸ್ಥಳದಿಂದ ತೆರಳಲು ಸಜ್ಜಾಗುತ್ತಿದ್ದ ಸಂಸದ ಮುನಿಯಪ್ಪ ಅವರನ್ನು ತಡೆದ ಪ್ರತಿಭಟನಾಕಾರರು, ಪ್ರತಿಭಟನೆ ಬಿಟ್ಟು ತೆರಳುವುದಾದರೇ ನಮ್ಮೆಲ್ಲರಿಗೂ ವಿಷಕೊಟ್ಟು ನಿಮ್ಮ ಪಾಡಿಗೆ ನೀವು ಹೋಗಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಆ ಬಳಿಕ ಪ್ರತಿಭಟನೆಗೆ ವಾಪಸ್ಸಾದ ಮುನಿಯಪ್ಪ ಅವರು ವೇದಿಕೆ ಹತ್ತಿ ಭಾಷಣ ಮಾಡಲು ಮುಂದಾಗುತ್ತಿದ್ದಂತೆಯೇ ಅವರ ಮೇಲೆ ಕೆಲವರು ನೀರಿನ ಬಾಟಲ್ ಎಸೆದು ಅವಮಾನಿಸಿದ ಪ್ರಸಂಗ ಕೂಡ ನಡೆಯಿತು.

ಕೇಂದ್ರದಲ್ಲಿ ಸಚಿವರಾಗಿದ್ದಾಗಲೇ ಸಮಸ್ಯೆಗೆ ಸ್ಪಂದಿಸದ ಮುನಿಯಪ್ಪ ಈಗ ಮೊಸಳೆ ಕಣ್ಣೀರು ಸುರಿಸುವುದು ಬೇಡ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಘಟನೆಯಿಂದ ವಿಚಲಿತರಾದ ನೀರಾವರಿ ಹೋರಾಟ ಸಮಿತಿ ಸದಸ್ಯರು ರೈತರನ್ನು ಸಮಾಧಾನಪಡಿಸಲು ಹರಸಾಹಸಪಟ್ಟರು. ಕೂಡಲೇ ಸ್ಥಳದಿಂದ ಹೊರಬಂದ ಮುನಿಯಪ್ಪ ಘಟನೆಯಿಂದ ತಮಗೆ ತೀವ್ರ ನೋವಾಗಿದ್ದು, ಜಿಲ್ಲೆಗೆ ನಾವು ನೀಡಿದ ಕೊಡುಗೆ ಹೊಸ ಪೀಳಿಗೆಗೆ ಗೊತ್ತಿಲ್ಲ ಎಂದು ಬೇಸರದಿಂದ ನುಡಿದರು. ಇದೇ ರೈತರನ್ನು ಸಮಾಧಾನಪಡಿಸಲು ಮುಂದಾದ ಸಚಿವ ಎಚ್​​​. ಆಂಜನೇಯ ಕೂಡ ರೈತರ ಕಂಗೆಣ್ಣಿಗೆ ಗುರಿಯಾಗಬೇಕಾಯಿತು.

ಯೋಜನೆ ಜಾರಿಯಾಗದಿದ್ದರೆ ರಾಜಿನಾಮೆ: ಶಾಸಕ ರಮೇಶ್ ಕುಮಾರ್
ಇದೇ ವೇಳೆ ಮಾತನಾಡಿದ ಶ್ರೀನಿವಾಸ ಪುರ ಶಾಸಕ ರಮೇಶ್ ಕುಮಾರ್ ಅವರು, ಸರ್ಕಾರ ಕೋಲಾರ ಜಿಲ್ಲಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸದಿದ್ದರೆ ತಾವು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದರು. ಅಲ್ಲದೆ ಪ್ರತಿಭಟನೆಗೆ ಸರ್ಕಾರ ಬಗ್ಗದಿದ್ದರೆ ಹೋರಾಟದ ಮುಂದಿನ ರೂಪುರೇಷೆಗಳನ್ನು ರೂಪಿಸಬೇಕಾಗುತ್ತದೆ ಎಂದು ರಮೇಶ್ ಕುಮಾರ್ ಹೇಳಿದರು.

ಸಮಸ್ಯೆ ಮುಂದುವರೆದರೆ ಕಟ್ಟಿ ಹಾಕಿ ಹೊಡೆಯುತ್ತಾರೆ: ನಂಜಾವಧೂತ ಸ್ವಾಮೀಜಿ
ಇನ್ನು ಕೋಲಾರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೀಗೆ ಮುಂದುವರೆದರೆ ಮುಂದೊಂದು ದಿನ ಜನ ಖಂಡಿತಾ ಜನಪ್ರತಿನಿಧಿಗಳನ್ನು ಕಟ್ಟಿ ಹಾಕಿ ಹೊಡೆಯುತ್ತಾರೆ ಎಂದು ಪಟ್ಟನಾಯಕನಹಳ್ಳಿ ಗುರುಗುಂಡೇಶ್ವರ ಮಠದ ಪೀಠಾಧ್ಯಕ್ಷರಾದ ನಂಜಾವಧೂತ ಸ್ವಾಮೀಜಿಗಳು ಹೇಳಿದರು.

ಒಟ್ಟಾರೆ ಕೋಲಾರ ಜಿಲ್ಲಗೆ ಶಾಶ್ವತ ಕುಡಿಯುವ ನೀರು ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಇಡೀ ಬಯಲು ಸೀಮೆ ಇಂದು ಒಂದಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com