
ಬೆಂಗಳೂರು: ಅಡ ಇಟ್ಟಿದ್ದ ಚಿನ್ನಾಭರಣ ಬಿಡಿಸಲು ಸಾಧ್ಯವಾಗದೇ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಮಹಿಳೆಯನ್ನು ಕೊಲೆ ಮಾಡಿದ್ದ ವ್ಯಕ್ತಿಯನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆ ಕೊರಟಗೆರೆಯ ರಾಮಸ್ವಾಮಿ (43) ಬಂಧಿತ. ಶುಕ್ರವಾರ ರಾತ್ರಿ ಪೀಣ್ಯ ಸಮೀಪದ ಭೈರವೇಶ್ವರ (4ನಗರದಲ್ಲಿ ಜಯಲಕ್ಷ್ಮಿ0) ಎಂಬುವರನ್ನು ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ. ಸ್ಥಳೀಯರು ನೀಡಿದ ಮಾಹಿತಿ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.
ಲಿವಿಂಗ್ ಟುಗೆದರ್: ಕೋಲಾರ ಮೂಲದ ವಿವಾಹಿತೆ ಜಯಲಕ್ಷ್ಮಿ ಗಂಡ ಮತ್ತು ಮೂವರು ಮಕ್ಕಳನ್ನು ತೊರೆದು ಬೆಂಗಳೂರಿಗೆ ಬಂದಿದ್ದರು. ಆರೋಪಿ ರಾಮಸ್ವಾಮಿಗೂ ಮದುವೆಯಾಗಿದ್ದು ಪತ್ನಿ- ಮಕ್ಕಳನ್ನು ತೊರೆದಿದ್ದ. ಪೇಂಟರ್ ಆಗಿದ್ದ ರಾಮಸ್ವಾಮಿ ಹಾಗೂ ಜಯಲಕ್ಷ್ಮಿ 5 ವರ್ಷಗಳಿಂದ ಭೈರವೇಶ್ವರ ನಗರದ ಮನೆಯಲ್ಲಿ ಒಟ್ಟಿಗೆ ಜೀವಿಸುತ್ತಿದ್ದರು. ಕೆಲ ತಿಂಗಳ ಹಿಂದೆ ಜಯಲಕ್ಷ್ಮಿ ಬಳಿಯಿದ್ದ ಚಿನ್ನದ ಆಭರಣವನ್ನು ರಾಮಸ್ವಾಮಿ ಗಿರವಿ ಅಂಗಡಿಯಲ್ಲಿ ಅಡವಿಟ್ಟು ಹಣ ಪಡೆದಿದ್ದ. ಆದರೆ, ಅದನ್ನು ಬಿಡಿಸಿಕೊಂಡಿರಲಿಲ್ಲ.
ಈ ವಿಚಾರವಾಗಿ 3 ತಿಂಗಳ ಹಿಂದೆ ಇಬ್ಬರ ನಡುವೆ ಜಗಳವಾಗಿತ್ತು. ಮನೆ ಬಿಟ್ಟು ಹೋದ ಜಯಲಕ್ಷ್ಮಿ ಪ್ರತ್ಯೇಕವಾಗಿ ನೆಲೆಸಿದ್ದಳು. ಮಾ.12ರಂದು ಆಭರಣ ಕೇಳಲು ಜಯಲಕ್ಷ್ಮಿ ಭೈರವೇಶ್ವರ ನಗರಕ್ಕೆ ಬಂದಿದ್ದಳು. ಒಡವೆ ಬಿಡಿಸಿಕೊಡು ವುದಾಗಿ ನಂಬಿಸಿದ ರಾಮಸ್ವಾಮಿ, ಜಯಲಕ್ಷ್ಮಿಯನ್ನು ಮನೆಯಲ್ಲೇ ಉಳಿಸಿಕೊಂಡಿದ್ದ. ಆದರೆ, ಮಾ.13 ರಂದು ಆಭರಣ ತರದಿದ್ದಾಗ ಜಗಳವಾಗಿದೆ. ಈ ವೇಳೆ ರಾಮಸ್ವಾಮಿ ಚಾಕುವಿನಿಂದ ಜಯಲಕ್ಷ್ಮಿಯ ಕತ್ತುಕುಯ್ದು ಕೊಲೆ ಮಾಡಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದ.
ಶುಕ್ರವಾರ ಸಂಜೆಯಾದರೂ ಮನೆಯಲ್ಲಿ ಚಲನವಲನ ಇಲ್ಲದ್ದನ್ನು ತಿಳಿದ ಅಕ್ಕಪಕ್ಕದ ನಿವಾಸಿಗಳು ಜಗಳವಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕೊರಟಗೆರೆಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೀಣ್ಯ ಪೊಲೀಸರು ತಿಳಿಸಿದ್ದಾರೆ.
Advertisement