ಮಹಿಳೆಯೊಂದಿಗೆ ಆಫ್ರಿಕಾ ಪ್ರಜೆ ಅಸಭ್ಯ ವರ್ತನೆ ಸ್ಥಳೀಯರಿಂದ ಗೂಸಾ

ಮಹಿಳೆಯೊಂದಿಗೆ ಆಫ್ರಿಕಾ ಪ್ರಜೆ ಅಸಭ್ಯ ವರ್ತನೆ ಸ್ಥಳೀಯರಿಂದ ಗೂಸಾ

ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆಂದು ಆರೋಪಿಸಿ ಆಫ್ರಿಕಾ ಮೂಲದ ಪ್ರಜೆಯನ್ನು ಸಾರ್ವಜನಿಕರು ಹಿಡಿದು ನಡುರಸ್ತೆಯಲ್ಲಿ ಥಳಿಸಿರುವ ಘಟನೆ...
Published on

ಬೆಂಗಳೂರು: ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆಂದು ಆರೋಪಿಸಿ ಆಫ್ರಿಕಾ ಮೂಲದ ಪ್ರಜೆಯನ್ನು ಸಾರ್ವಜನಿಕರು ಹಿಡಿದು ನಡುರಸ್ತೆಯಲ್ಲಿ ಥಳಿಸಿರುವ ಘಟನೆ ಮಹದೇವಪುರದಲ್ಲಿ ಭಾನುವಾರ ನಡೆದಿದೆ.

ನಗರದ ಆ್ಯಟಸ್ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಕಾಂಗೋ ರಾಷ್ಟ್ರದ ಮ್ಯಾಂಡೇಹಿರೋ (29) ಹಲ್ಲೆಗೊಳಗಾದವ. ಈ ಸಂಬಂಧ ನೊಂದ ಮಹಿಳೆ ಮಹಾದೇವಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಲ್ಲೆಗೊಳಗಾದ ಕಾಂಗೋ ಪ್ರಜೆ ಕೂಡಾ ಪ್ರತಿದೂರು ದಾಖಲಿಸಿದ್ದಾನೆ.

ನಡೆದಿದ್ದೇನು?: ಇಲ್ಲಿನ ಎಇಸಿಎಸ್ ಬಡಾವಣೆಯಲ್ಲಿ ಮಹಿಳೆಯೊಬ್ಬರು ಬಟ್ಟೆ ಇಸ್ತ್ರಿ ಮಾಡುವ ಅಂಗಡಿ ಇಟ್ಟುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಅಂಗಡಿಗೆ ಹೋಗಿದ್ದ ಆರೋಪಿ ಮ್ಯಾಂಡೇಹಿರೋ, ರು.500 ನೀಡಿ ಸೋಮವಾರ ತನ್ನೊಂದಿಗೆ ದೈಹಿಕ ಸಂಪರ್ಕಕ್ಕೆ ಬಾ ಎಂದು ಕರೆದಿದ್ದನಂತೆ.
ಇದರಿಂದ ಕುಪಿತಗೊಂಡ ಮಹಿಳೆ ಆತನಿಗೆ ಬೈದು ಕಳುಹಿಸಿದ್ದಳು. ಕೆಲಸದ ಮೇಲೆ ಪತಿ ಹೊರಗೆ ಹೋಗಿದ್ದ ಕಾರಣ ಹೆಚ್ಚಿಗೆ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದಳು. ಆದರೆ, ಭಾನುವಾರ ಪತಿ ಅಂಗಡಿಗೆ ಬಂದಾಗ, ಆರೋಪಿ ರಸ್ತೆಯಲ್ಲಿ ಹೋಗುತ್ತಿದ್ದ, ಆತನನ್ನು ಗಮನಿಸಿದ ಮಹಿಳೆ ಶನಿವಾರ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಬಗ್ಗೆ ಪತಿಗೆ ಮಾಹಿತಿ ನೀಡಿದ್ದಾಳೆ.

ಕೂಡಲೇ ಆಕೆಯ ಪತಿ ತನ್ನ ಸಹೋದರರೊಂದಿಗೆ ಸೇರಿ ರಸ್ತೆಯಲ್ಲಿ ಮ್ಯಾಂಡೇಹಿರೋನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಮಹಾದೇವಪುರ ಠಾಣೆಗೆ ಕರೆತಂದು ದೂರು ದಾಖಲಿಸಿದ್ದಾರೆ.

ಸುಳ್ಳು ಆರೋಪ
ಇದೇ ವೇಳೆ ಸ್ಥಳೀಯರ ಆರೋಪವನ್ನು ಮ್ಯಾಂಡೇಹಿರೋ ನಿರಾಕರಿಸಿದ್ದಾನೆ. ತಾನು ಕೆಲಸಕ್ಕೆ ಹೋಗಿದ್ದು ಶನಿವಾರ ಈ ಪ್ರದೇಶದಲ್ಲಿ ಇರಲೇ ಇಲ್ಲ. ಭಾನುವಾರ ಸ್ನೇಹಿತನನ್ನು ಭೇಟಿ ಮಾಡಲು ಹೋಗುತ್ತಿದ್ದಾಗ ತನ್ನನ್ನು ಅಡ್ಡಗಟ್ಟಿ ಕಾರಣವಿಲ್ಲದೇ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾನೆ. ಅಲ್ಲದೇ, ಹಲ್ಲೆ ನಡೆಸಿದವರ ವಿರುದ್ಧ ದೂರು ನೀಡಿದ್ದಾನೆ.

ಎರಡೂ ಕಡೆಯಿಂದ ದೂರು ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೂರ್ವ ವಿಭಾಗ ಡಿಸಿಪಿ ಸತೀಶ್ ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com