ವಿದ್ಯಾರ್ಥಿನಿ ಗೌತಮಿ ಕೊಲೆ: ನ್ಯಾಯ ಸಿಗಬೇಕೆಂದು ಕಣ್ಣೀರಿಟ್ಟ ತಂದೆ

ಪ್ರೀತಿಸಲು ನಿರಾಕರಿಸಿದ ಪಿಯು ವಿದ್ಯಾರ್ಥಿನಿ ಗೌತಮಿಯನ್ನು ಗುಂಡಿಟ್ಟು ಕೊಲೆ ಮಾಡಿರುವ ಆರೋಪಿ ಮಹೇಶನನ್ನು ಕೂಡಲೇ ಬಂಧಿಸಬೇಕು.
ಮೃತ ವಿದ್ಯಾರ್ಥಿನಿ ಗೌತಮಿ
ಮೃತ ವಿದ್ಯಾರ್ಥಿನಿ ಗೌತಮಿ

ಬೆಂಗಳೂರು: ಪ್ರೀತಿಸಲು ನಿರಾಕರಿಸಿದ ಪಿಯು ವಿದ್ಯಾರ್ಥಿನಿ ಗೌತಮಿಯನ್ನು ಗುಂಡಿಟ್ಟು ಕೊಲೆ ಮಾಡಿರುವ ಆರೋಪಿ ಮಹೇಶನನ್ನು ಕೂಡಲೇ ಬಂಧಿಸಬೇಕು. ತನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಗೌತಮಿ ತಂದೆ ರಮೇಶ್ ಆಗ್ರಹಿಸಿದ್ದಾರೆ.

ಮಗಳ ಸಾವಿನ ಸುದ್ಧಿ ಕೇಳಿ ಮನ ನೊಂದಿರುವ ರಮೇಶ್ ಅವರು ನನ್ನ ಮಗಳು ಈ ವರ್ಷವಷ್ಟೇ ಪಿಯುಸಿ ಮುಗಿಸಿ ಸಿಇಟಿ ತರಬೇತಿಗಾಗಿ ಹಾಸ್ಟೆಲ್ ನಲ್ಲಿದ್ದಳು. ಉತ್ತಮವಾಗಿ ಓದುತ್ತಿದ್ದ ಗೌತಮಿ ರ್ಯಾಂಕ್ ವಿದ್ಯಾರ್ಥಿನಿಯಾಗಿದ್ದಳು. ಅಂತ ಮಗಳನ್ನು ಕ್ರೂರವಾಗಿ ಕೊಂದಿರುವ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟರು.

ಇದೇ ವೇಳೆ, ಗೌತಮಿ ಸಾವಿನ ಸುದ್ಧಿಯನ್ನು ಪ್ರಿನ್ಸಿಪಾಲರು ಮಾಹಿತಿ ನೀಡಿಲ್ಲ ಎಂದು ದೂರಿದರು. ಅಲ್ಲದೆ ಗೌತಮಿ ಸಾವಿನ ಬಗ್ಗೆ ಇಲ್ಲ ಸಲ್ಲದ ಊಹಾಪೋಹ ವಿಚಾರಗಳನ್ನು ಹರಿಬಿಡುತ್ತಿದ್ದು, ನನ್ನ ಮಗಳ ನಡತೆಗೆ ಕಳಂಕ ತರುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

ಪ್ರೀತಿಸಲು ನಿರಾಕರಿಸಿದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಗೆ ಅಟೆಂಡರ್​ ಒಬ್ಬ ಗುಂಡು ಹಾರಿಸಿ ಕೊಂದ ಘಟನೆ ಬೆಳಗ್ಗೆ ಬೆಂಗಳೂರಿನ ಮಹಿಳಾ​ ಹಾಸ್ಟೆಲೊಂದರಲ್ಲಿ ನಡೆದಿತ್ತು.

ನಗರದ ಕಾಡುಗೋಡಿ ಬಳಿ ಇರುವ ರೆಸಿಡೆನ್ಷಿಯಲ್​ ಸ್ಕೂಲ್​’ನಲ್ಲಿ ಈ ಘಟನೆ ನಡೆದಿತ್ತು. ತನ್ನನ್ನು ಪ್ರೀತಿಸುವಂತೆ ಅಟೆಂಡರ್ ಮಹೇಶ್ ಒತ್ತಾಯ ಮಾಡುತ್ತಿದ್ದ. ಇದನ್ನು ಒಪ್ಪದ ವಿದ್ಯಾರ್ಥಿನಿ ಗೌತಮಿಗೆ ಪಿಸ್ತೂಲ್ ನಿಂದ ತಲೆಗೆ ಗುಂಡಿಕ್ಕಿ ಹತ್ಯೆಗೈದಿದ್ದು ಅಲ್ಲದೇ ವಿದ್ಯಾರ್ಥಿನಿಯ ಸ್ನೇಹಿತೆ ಶಿರಿಶಾ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದ.

ಮೃತ ವಿದ್ಯಾರ್ಥಿನಿ ಗೌತಮಿ ತುಮಕೂರು ಜಿಲ್ಲೆ ಪಾವಗಡದವಳಾಗಿದ್ದು, ಆಕೆ ಕಾಲೇಜು ಹಾಸ್ಟೆಲ್ ನಲ್ಲಿ ತಂಗಿದ್ದಳು.

ಶಿವಮೊಗ್ಗ ಮೂಲದ ಮಹೇಶ 2012ರಿಂದ ಈ ಹಾಸ್ಟೆಲ್ ನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಹಾಸ್ಟೆಲ್ ಗೆ ಬಂದ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಪರಾರಿಯಾಗಿರುವ ಆರೋಪಿ ಮಹೇಶನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com