ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮರಗಳ ಅಕ್ರಮ ಸಾಗಣೆ ಎಫ್ಐಆರ್ ದಾಖಲು

ಮಳೆಯಿಂದ ಧರೆಗುರುಳಿದ ಮರಗಳ ಅಕ್ರಮ ಸಾಗಣೆಗೆ ಯತ್ನಿಸಿದ ಆರೋಪದ ಮೇಲೆ ಬಿಬಿಎಂಪಿ ಗುತ್ತಿಗೆದಾರನ ವಿರುದ್ಧ ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ...
Published on

ಬೆಂಗಳೂರು: ಮಳೆಯಿಂದ ಧರೆಗುರುಳಿದ ಮರಗಳ ಅಕ್ರಮ ಸಾಗಣೆಗೆ ಯತ್ನಿಸಿದ ಆರೋಪದ ಮೇಲೆ ಬಿಬಿಎಂಪಿ ಗುತ್ತಿಗೆದಾರನ ವಿರುದ್ಧ ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ದಕ್ಷಿಣ ವಿಭಾಗ ವಲಯ ಅರಣ್ಯ ಅಧಿಕಾರಿ (ಆರ್‍ಎಫ್ಒ) ಪುಟ್ಟಸ್ವಾಮಿ ಗೌಡ ಎಂಬುವವರು ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದು, ಎಫ್ಐಆರ್ ದಾಖ ಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಕಳೆದೊಂದು ವಾರದಿಂದ ನಗರದಲ್ಲಿ ಸುರಿಯುತ್ತಿರುವ ಮಳೆಗೆ ಜಯನಗರ 6ನೇ ಬ್ಲಾಕ್‍ನಲ್ಲಿ ಬೆಲೆ ಬಾಳುವ ಓಕ್ ಮತ್ತು ಸಿಲ್ವರ್ ಸೇರಿದಂತೆ ಹಲವು ಮರಗಳು ಉರುಳಿ ಬಿದ್ದಿವೆ. ವಾಹನ ಹಾಗೂ ಜನ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಕಾರಣ ಪಾಲಿಕೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಮರಗಳನ್ನು ಕತ್ತರಿಸಿ ರಸ್ತೆ ಬದಿ ಸಂಗ್ರಹಿಸಿದ್ದರು.

ಶುಕ್ರವಾರ ತಡರಾತ್ರಿ ಅಪರಿಚಿತರು ಮರದ ತುಂಡುಗಳನ್ನು ಲಾರಿಗೆ ತುಂಬಿಸಿಕೊಂಡು ಸಾಗಿಸಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ವಾಹನ ತಡೆದು ಪ್ರಶ್ನಿಸಿದಾಗ ಲಾರಿ ಚಾಲಕ ಮತ್ತು ಸಿಬ್ಬಂದಿ ಸೂಕ್ತ ಉತ್ತರ ನೀಡಿಲ್ಲ. ಹೀಗಾಗಿ, ಅನುಮಾನಗೊಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಆರ್‍ಎಫ್ಓ ಪುಟ್ಟಸ್ವಾಮಿಗೌಡ ಅವರು ಸ್ಥಳಕ್ಕೆ ತೆರಳಿ ಧಾವಿಸಿ ಪರಿಶೀಲಿಸಿದಾಗ ಅಕ್ರಮವಾಗಿ ಮರದ ತುಂಡುಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಪುಟ್ಟಸ್ವಾಮಿಗೌಡರು ನೀಡಿದ ದೂರಿನ ಆಧಾರದ ಮೇಲೆ ಜಯನಗರ ಪೊಲೀಸರು ಲಾರಿ ಚಾಲಕ ಮತ್ತು ಮರಗಳ ತುಂಬಲು ಬಂದಿದ್ದ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಆರಂಭದಲ್ಲಿ ಬಿಬಿಎಂಪಿ ಅಧಿಕಾರಿಗಳ ಸೂಚನೆ ಮೇರೆಗೆ ಮರಗಳನ್ನು ಯಾರ್ಡ್ ಗೆ ಸಾಗಿಸುತ್ತಿದ್ದಾಗಿ ಚಾಲಕರು ಹೇಳಿದ್ದರು. ಬಳಿಕ ಗುತ್ತಿಗೆದಾರ ಶ್ರೀನಿವಾಸ್ ನಿರ್ದೇಶನದಂತೆ ಮರ ಸಾಗಿಸುತ್ತಿದ್ದೆವೆಂದು ಹೇಳಿಕೆ ನೀಡಿದ್ದಾರೆ. ಶ್ರೀನಿವಾಸ್ ವಿರುದ್ಧ ಮರ ಕಳ್ಳತನ ಯತ್ನ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಿಬಿಎಂಪಿ ಅಧಿಕಾರಿಗಳ ಹೇಳಿಕೆ ದಾಖಲಿಸಿಕೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com