ತಮಿಳ್ನಾಡಲ್ಲಿ ಕನ್ನಡಕ್ಕೆ ನಿರ್ಬಂಧ ಡಾ. ಸಿದ್ದಲಿಂಗಯ್ಯ ವಿಷಾದ

ತಮಿಳುನಾಡಿನಲ್ಲಿರುವ ಕನ್ನಡಿಗರಿಗೆ ಕನ್ನಡ ಕಲಿಯಲು ಅಲ್ಲಿನ ಸರ್ಕಾರ ಪ್ರಸಕ್ತ ವರ್ಷದಿಂದ ನಿರ್ಬಂಧ ಹೇರಿದೆ. ಅಲ್ಲದೆ ಹೊರಗೆ ಕನ್ನಡ ಮಾತನಾಡುವುದನ್ನೂ ತಡೆಯುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಕನ್ನಡಿಗರು ಅತಂತ್ರರಾಗುವ ಸ್ಥಿತಿ ನಿರ್ಮಾಣವಾಗಿದೆ...
ಡಾ. ಸಿದ್ದಲಿಂಗಯ್ಯ
ಡಾ. ಸಿದ್ದಲಿಂಗಯ್ಯ

ಬೆಂಗಳೂರು: ತಮಿಳುನಾಡಿನಲ್ಲಿರುವ ಕನ್ನಡಿಗರಿಗೆ ಕನ್ನಡ ಕಲಿಯಲು ಅಲ್ಲಿನ ಸರ್ಕಾರ ಪ್ರಸಕ್ತ ವರ್ಷದಿಂದ ನಿರ್ಬಂಧ ಹೇರಿದೆ. ಅಲ್ಲದೆ ಹೊರಗೆ ಕನ್ನಡ ಮಾತನಾಡುವುದನ್ನೂ
ತಡೆಯುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಕನ್ನಡಿಗರು ಅತಂತ್ರರಾಗುವ ಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಅಲ್ಲಿನ ಕನ್ನಡಿಗರಿಗೆ ನೆರವಾಗಬೇಕು ಎಂದು ಹಿರಿಯ ಸಾಹಿತಿ ಡಾ. ಸಿದ್ದಲಿಂಗಯ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ನಗರದ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಬುಧವಾರ ನಡೆದ ಬೆಂಗಳೂರು ನಗರ ಜಿಲ್ಲಾ 9ನೇ ಕನ್ನಡ ಸಾಹಿತ್ಯಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಕನ್ನಡಕ್ಕಾಗಿ ಶ್ರಮಿಸಿದವರನ್ನು ಸನ್ಮಾನಿಸಿ ಮಾತನಾಡಿದ ಅವರು, `ತಮಿಳುನಾಡಿನಲ್ಲಿ 2 ಅಥವಾ 3ನೇ ಭಾಷೆಯಾಗಿ ಕನ್ನಡ ಕಲಿಯಲು ಅವಕಾಶವಿತ್ತು. ಆದರೆ, ಈ ವರ್ಷದಿಂದ ಅಲ್ಲಿನ ಸರ್ಕಾರ ಅದಕ್ಕೂ ನಿರ್ಬಂಧಿಸಿದೆ.

ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿನ ಕನ್ನಡಿಗರು ತಮ್ಮ ಅಳಲನ್ನು ತೋಡಿಕೊಂಡರು. ಅಲ್ಲದೆ ಮನೆಗಳಲ್ಲೂ ಕನ್ನಡ
ಮಾತನಾಡದಂತೆ ನಿರ್ಬಂಧಿಸಲಾಗುತ್ತಿದೆ. ಆದ್ದರಿಂದ ಸರ್ಕಾರ ಕೂಡಲೇ ತಮಿಳುನಾಡು ಸರ್ಕಾರದ ಜತೆ ಚರ್ಚಿಸಿ, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಅಲ್ಲಿನ ಕನ್ನಡಿಗರು, ಕನ್ನಡ ಉಳಿಯುವುದು ಸಾಧ್ಯವಿಲ್ಲ' ಎಂದರು.

ತಮಿಳುನಾಡಿನಲ್ಲಿ 3.5 ಲಕ್ಷ ಒಕ್ಕಲಿಗರಿದ್ದು, 25 ಲಕ್ಷ ಕನ್ನಡಿಗರಿದ್ದಾರೆ. ವಿದ್ಯಾರ್ಥಿಗಳು ಕನ್ನಡ ಬಿಟ್ಟು ತಮಿಳು ಭಾಷೆ ಕಲಿಯುವಂತೆ ಒತ್ತಡ ಹೇರುತ್ತಿದೆ. ತಮಿಳುನಾಡು ಸರ್ಕಾರದ ಈ ವರ್ತನೆ ಸರಿಯಲ್ಲ. ಸರ್ಕಾರ ಇನ್ನೂ ಮೌನವಹಿಸಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಬೇಸರ ವ್ಯಕ್ತಪಡಿಸಿದರು. ಸಂವಿಧಾನ ತಿದ್ದುಪಡಿ ಅಗತ್ಯ: ಮಾತೃಭಾಷೆ ಕಡ್ಡಾಯ ಮಾಡುವ ಬಗ್ಗೆ ಉಂಟಾಗಿರುವ ಸಮಸ್ಯೆ ಬಗ್ಗೆ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದಾಗ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.ಹಾಗಾಗಿ ಸ್ಥಳೀಯ ಭಾಷೆಗಳ ಉಳಿವಿಗೆ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಸೂಕ್ತ ಕ್ರಮಕೈಗೊಳ್ಳಬೇಕು. ಅಳಿವಿನ ಅಂಚಿಗೆ ಬಂದಿರುವ ಭಾಷೆಗಳನ್ನು ಉಳಿಸಬೇಕು ಎಂದು ಮನವಿ ಮಾಡಿದರು.

ಬೆಂಗಳೂರಿನಲ್ಲಿ ಕನ್ನಡ ಉಳಿದರೆ ರಾಜ್ಯದಲ್ಲಿ ಕನ್ನಡ ಉಳಿಯುತ್ತದೆ. ಹಾಗಾಗಿ ನಗರದ ನಿವಾಸಿಗಳು ಕನ್ನಡ ಮಾತನಾಡಿ, ಹೊರಗಿನವರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ಮುಂದಾಗಬೇಕು.
ಕೊನೆಪಕ್ಷ ಕನ್ನಡದಲ್ಲಿ ಮಾತನಾಡಿದರೆ ಕನ್ನಡ ಉಳಿಸಲು ಸಾಧ್ಯ. ಕನ್ನಡ ಉಳಿಸಲು ಎಲ್ಲರೂ ದೀಕ್ಷೆ ತೊಡಿ ಎಂದು ಹೇಳಿದರು. ಮೇಕೆದಾಟು ಕೈಬಿಡಬೇಡಿ: ಸರ್ಕಾರ ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆಯನ್ನು ಕೈಬಿಡಬಾರದು. ಈ ವಿಚಾರದಲ್ಲಿ ಹಿಂಜರಿಯದೆ ಮುನ್ನುಗ್ಗಲಿ. ಅದಕ್ಕೆ ಕನ್ನಡಿಗರ ಸಹಕಾರ ಎಂದಿಗೂ ಇದ್ದೆ ಇರುತ್ತದೆ ಎಂದರು.

ಸರ್ಕಾರ ಬಿಬಿಎಂಪಿ ವಿಭಜನೆಯನ್ನು ಕೈಬಿಡಬೇಕು. ಬಿಬಿಎಂಪಿ ವಿಭಜನೆ ಮಾಡಿದಲ್ಲಿ ಹೃದಯವನ್ನೇ ಮೂರು ಭಾಗಗಳಾಗಿ ಕತ್ತರಿಸಿದಂತಾಗುತ್ತದೆ. ಹಾಗಾಗಿ ಈ ಯೋಜನೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಇನ್ನು ಗೋವಾ ಕನ್ನಡಿಗರ ರಕ್ಷಣೆಗೆ ಸರ್ಕಾರ ಮುಂದಾಗಿರುವುದು ಶ್ಲಾಘನೀಯ. ಜನರೂ ಅಲ್ಲಿನ ಕನ್ನಡಿಗರ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಕನ್ನಡದ ಸೇವೆಯಲ್ಲಿ ತೊಡಗಿರುವ 30 ಗಣ್ಯರನ್ನು ಸನ್ಮಾನಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com