ಬಿಬಿಎಂಪಿಗೆ ಬಂಪರ್!

ಮತ ಓಲೈಕೆಗೆ ಅನುವಾಗುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು ರಾಜಧಾನಿಗೆ ಮೂರು ಎಲಿವೇಟೆಡ್ ರಸ್ತೆ ಯೋಜನೆ, ಈ ತಿಂಗಳಲ್ಲಿ ರಸ್ತೆಗಳು ಗುಂಡಿಮುಕ್ತ...
ಬಿಬಿಎಂಪಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಸಿದ್ಧರಾಮಯ್ಯ
ಬಿಬಿಎಂಪಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಸಿದ್ಧರಾಮಯ್ಯ

ಬೆಂಗಳೂರು: ಬಿಬಿಎಂಪಿ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ತಾಕೀತು ಮಾಡುತ್ತಿದ್ದಂತೆ ರಾಜ್ಯ ಸರ್ಕಾರ ಭರ್ಜರಿ ತಯಾರಿ ನಡೆಸಿದೆ. ಮತ ಓಲೈಕೆಗೆ ಅನುವಾಗುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು ರಾಜಧಾನಿಗೆ ಮೂರು ಎಲಿವೇಟೆಡ್  ರಸ್ತೆ ಯೋಜನೆ, ಈ ತಿಂಗಳಲ್ಲಿ ರಸ್ತೆಗಳು ಗುಂಡಿಮುಕ್ತ  ಹಾಗೂ ಸಾಲದಲ್ಲಿರುವ ಬಿಬಿಎಂಪಿಗೆ ರು. 1000 ಕೋಟಿ ಅನುದಾನವನ್ನು  ಕೊಡುಗೆಯನ್ನು ನೀಡಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ಧರಾಮಯ್ಯ ಶುಕ್ರವಾರ ಬಿಬಿಎಂಪಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ನೂತನ ಯೋಜನೆ ಪ್ರಕಟಿಸಿದ್ದಾರೆ. ಉತ್ತರ -ದಕ್ಷಿಣದಲ್ಲಿ ಒಂದು ಹಾಗೂ ಪೂರ್ವ-ಪಶ್ಚಿಮ ಭಾಗದಲ್ಲಿ ಒಟ್ಟು  64 ಕಿಮೀ ಉದ್ದದ ಎಲಿವೇಟೆಡ್ ಕಾರಿಡಾರ್ ರಸ್ತೆ ನಿರ್ಮಿಸುವ ಯೋಜನೆ ಘೋಷಿಸಿದರು.

ಉತ್ತರ- ದಕ್ಷಿಣದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ವೃತ್ತದಿಂದ ಆರಂಭವಾಗುವ 16 ಕಿಮೀ.ಉದ್ದದ ಕಾರಿಡಾರ್ ಹೆಬ್ಬಾಳದಲ್ಲಿ ಕೊನೆಗೊಳ್ಳಲಿದೆ. ಕೆ.ಆರ್. ಪುರದಿಂದ ಆರಂಭವಾಗುವ  21 ಕಿಮೀ ಉದ್ದದ ಪೂರ್ವ-ಪಶ್ಚಿಮ ಕಾರಿಡಾರ್ ಗೊರಗುಂಟೆ ಪಾಳ್ಯದಲ್ಲಿ ಮುಕ್ತಾಯಗೊಳ್ಳಲಿದೆ. ಮತ್ತೊಂದು ಪೂರ್ವ-ಪಶ್ಚಿಮ ಕಾರಿಡಾರ್27 ಕಿಮೀ ಉದ್ದವಿದ್ದು, ಜ್ಞಾನಭಾರತಿ ರಸ್ತೆ ಬಳಿಯಿಂದ ಆರಂಭವಾಗಿ  ವೈಟ್ ಫೀಲ್ಡ್  ನಲ್ಲಿ ಕೊನೆಗೊಳ್ಳಲಿದೆ.
ಮೂರು ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಸರ್ಕಾರ  ಜಾಗತಿಕ ಮಟ್ಟದಲ್ಲಿ ಟೆಂಡರ್ ಕರೆಯಲಿದೆ. ಬೃಹತ್ ಯೋಜನೆಯಾಗಿರುವುದರಿಂದ ಹಾಗೂ ನಿರ್ವಹಣೆಯೂ ಸವಾಲಾಗಿರುವುದರಿಂದ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಈ  ಮಾದರಿಯ ಟೆಂಡರ್ ಕರೆಯಲಿದೆ. ಟೋಲ್ ಆಧಾರದಲ್ಲಿ ಕಾರಿಡಾರ್ ನಿರ್ವಹಣೆಯಾಗಲಿದೆ.  ಸಾರ್ವಜನಿಕ - ಖಾಸಗಿ ಸಹಭಾಗಿತ್ವದಲ್ಲಿ ಅಥವಾ   ಸಹಭಾಗಿತ್ವದಲ್ಲಿ ಅಥವಾ `ಡಿಬೂಟ್'  ಮಾದರಿಯಲ್ಲಿ ರಸ್ತೆ ಕಾಮಗಾರಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.


ರಸ್ತೆ ಗುಂಡಿ ಮುಚ್ಚಲು ಗಡುವು
:ರಸ್ತೆಗುಂಡಿಗಳು ಹೆಚ್ಚಿದ್ದು, ಮೇ ಅಂತ್ಯದೊಳಗೆ ಗುಂಡಿ ಮುಚ್ಚುಬೇಕು. ವಾಹನ ಸಂಚಾರಕ್ಕೆ ಗುಂಡಿಗಳಿಂದ ಸಾಕಷ್ಟು ತೊಂದರೆಯಾಗುತ್ತಿದ್ದು, ತಿಂಗಳಾಂತ್ಯದೊಳಗೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಪೂರ್ಣಗೊಳಿಸಬೇಕು. ಮಳೆ ನೀರು ಹರಿಯುವ ಕಾಲುವೆಗಳ ಹೂಳು ತೆಗೆಯಲು ಕೂಡಲೇ  ಕ್ರಮ ಕೈಗೊಳ್ಳಬೇಕು.  ರಸ್ತೆ  ಬದಿಗಳಲ್ಲಿ ಬಿದ್ದಿರುವ  ಕಟ್ಟಡ ತಾಜ್ಯವನ್ನು  ಶೀಘ್ರದಲ್ಲಿ  ತೆರವುಗೊಳಿಸಬೇಕು.  ಕಸ ವಿಲೇವಾರಿ ನಿರ್ವಹಣೆಯೂ ಸಮರ್ಪಕವಾಗಿ ನಡೆಯಬೇಕಿದ್ದು, ಹೊಸತಾಗಿ ನಿರ್ಮಿಸಲಿರುವ 6 ಕಸ ಸಂಸ್ಕರಣಾ ಘಟಕಗಳು ಎರಡು ತಿಂಗಳಲ್ಲಿ ಕಾರ್ಯಾರಂಭ ಮಾಡುವಂತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಭೆಲ್ಲಿ ಸೂಚನೆ ನೀಡಿದ್ದಾರೆ.


ಅವಾಸ್ತವ ಬಜೆಟ್: ಬಿಬಿಎಂಪಿಯಲ್ಲಿ ಆರ್ಥಿಕವಾಗಿ ಅಶಿಸ್ತು ಉಂಟಾಗಲು ಅವಾಸ್ತವಿಕ ಬಜೆಟ್ ಕಾರಣ. ಬಿಜೆಪಿಯೇ ಇದಕ್ಕೆ ಹೊಣೆಯಾಗಿದ್ದು, ಆದಾಯ ಮೀರಿ ಬಜೆಟ್ ವಮಂಡಿಸಿತ್ತು. ಮನಸೋಯಿಚ್ಛೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು ಹಾಗೂ ಇಷ್ಟ ಬಂದಂತೆ ಬಿಲ್ ಮಂಜೂರು ಮಾಡಿದ್ದರಿಂದ ಆಡಳಿತ ಮತ್ತು ಹಣಕಾಸು ವ್ಯವಸ್ಥೆ ಹದಗೆಟ್ಟಿತ್ತು. 2014-15ನೇ ಸಾಲಿನಲ್ಲಿ ಬಜೆಟ್ ಗಾತ್ರ ತಗ್ಗಿಸಿದ ಬಳಿಕ ಪರಿಸ್ಥಿತಿ ಕೊಂಚ ಸುಧಾರಿಸಿದ್ದು, ಸದ್ಯಕ್ಕೆ ೀಹ. 2500 ಕೋಟಿ ಮೊತ್ತದ ಕಾಮಗಾರಿಗಳು ಬಾಕಿ ಉಳಿದಿವೆ. 1,677 ಕಾಮಗಾರಿಗಳು ನಡೆಯುತ್ತಿದ್ದು, ರು. 1,800 ಕೋಟಿ ಮೊತ್ತದ ಕಾಮಗಾರಿಗಳು ಆರಂಭವಾಗಬೇಕಿದೆ. ರು. 3100 ಕೋಟಿ ಸಾಲವಿದ್ದು,  ರು.1,295 ಕೋಟಿ ಬಿಲ್ ಬಾಕಿ ಉಳಿದಿದ್ದು. ಒಟ್ಟು  ರು.9 ಸಾವಿರು ಪಾವತಿ ಮಾಡಬೇಕಿದೆ ಎಂದರು.ತೆರಿಗೆಯ ಅಸಮರ್ಪಕ ವಸೂಲಿ ಬಿಬಿಎಂಪಿ ಹಾಳಾಗಲು ಮತ್ತೊಂದು ಕಾರಣ. ನಗರದಲ್ಲಿ 16 ಲಕ್ಷಕ್ಕೂ  ಹೆಚ್ಚು ಆಸ್ತಿ ಗಳಿಸಿದ್ದು, 3 ಲಕ್ಷಕ್ಕೂ ಅಧಿಕ ಆಸ್ತಿಗಳು  ತೆರಿಗೆ ಜಾಲದಿಂದ ಹೊರಗಿವೆ. ಬಹಳ ವರ್ಷಗಳಿಂದ ಬಿಬಿಎಂಪಿ ಕಟ್ಟಡಗಳ ಬಾಡಿಗೆ ದರ ಪರಿಷ್ಕರಣೆಯಾಗಿಲ್ಲ . ಹೀಗಾಗಿ ಪರಿಷ್ಕರಣೆಗೂ ಸೂಚನೆ ನೀಡಲಾಗಿದೆ. ಜಾಹೀರಾತು ಫಲಕಗಳಿಂದ ಬಿಬಿಎಂಪಿಗೆ ವಾರ್ಷಿಕ ರು. 1ಸಾವಿರ ಕೋಟಿ ಆದಾಯ ಬರಬೇಕಿದೆ. ರು. 25-30 ಕೋಟಿ ಸಂಗ್ರಹವಾಗು ತ್ತಿದ್ದು, ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು. ಸಚಿವರಾದ ಕೆ.ಜೆ. ಜಾರ್ಜ್, ರೋಷನ್ ಬೇಗ್, ದಿನೇಶ್ ಗುಂಡೂರಾವ್, ಆಡಳಿತಾಧಿಕಾರಿ ಟಿ.ಎಂ. ವಿಜಯಭಾಸ್ಕರ್, ಆಯುಕ್ತ ಕುಮಾರ್ ನಾಯಕ್ ಹಾಜರಿದ್ದರು.



ಅಧಿಕಾರಿಗಳಿಗೆ ತರಾಟೆ
ಬಿಬಿಎಂಪಿ ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕಿದ್ದು, ಕರ್ತವ್ಯ ಲೋಪ ಎಸಗುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು. ನಗರದ ಕಾಮಗಾರಿಗಳ ಪ್ರಗತಿ ಹಾಗೂ ಸಮಸ್ಯೆಗಳನ್ನು ಪರಿಶೀಲಿಸಲು ವಾರಕ್ಕೊಮ್ಮೆ ತಪಾಸಣೆ ನಡೆಸಲಿದ್ದು, ಈ ವೇಳೆ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳು ಕಂಡುಬಂದರೆ ಸ್ಥಳದಲ್ಲೇ ಅಮಾನತು ಮಾಡಲಾಗುವುದು ಎಂದರು.


ರು. 1ಸಾವಿರ ಕೋಟಿ ಅನುದಾನ
ಬಿಬಿಎಂಪಿಗೆ ರಾಜ್ಯ ಸರ್ಕಾರ ರು. 1 ಸಾವಿರ ಕೋಟಿ ಅನುದಾನ ನೀಡುವುದಾಗಿ ಘೋಷಿಸಿದೆ. ಬಿಬಿಎಂಪಿ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಆರ್ಥಿಕ ನೆರವು ನೀಡಲಾಗಿದೆ. ಆದರೆ ಈ ಮೊತ್ತವನ್ನು ನಗರದಲ್ಲಿ ಕೈಗೊಳ್ಳುವ ಹೊಸ ಕಾಮಗಾರಿಗಳಿಗೆ ಮಾತ್ರ ಬಳಸಬೇಕು. ಹೊಸ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೇ ನಿರ್ವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com