ನೀರು, ರಸ್ತೆ ಅಭಿವೃದ್ಧಿಗೆ ರು.216 ಕೋಟಿ

ಗ್ರಾಮೀಣ ಪ್ರದೇಶಗಳ ಕುಡಿಯುವ ನೀರು ಹಾಗೂ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ರು.216.27 ಕೋಟಿ ಬಿಡುಗಡೆ ಮಾಡಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಗ್ರಾಮೀಣ ಪ್ರದೇಶಗಳ ಕುಡಿಯುವ ನೀರು ಹಾಗೂ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ರು.216.27 ಕೋಟಿ ಬಿಡುಗಡೆ ಮಾಡಿದೆ.

ತಾಲೂಕುವಾರು ಹಣ ಬಿಡುಗಡೆ ಮಾಡುತ್ತಿದ್ದು, ಕುಡಿಯುವ ನೀರು ಹಾಗೂ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಾಜ್ಯ ಸರ್ಕಾರದ ಈ ಘೋಷಣೆಗೂ ಪಂಚಾಯತ್
ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್. ಕೆ.ಪಾಟೀಲ್ ತಿಳಿಸಿದ್ದಾರೆ.

ಕುಡಿಯುವ ನೀರಿಗಾಗಿ ಪ್ರತಿ ತಾಲೂಕಿಗೆ ರು.40ರಿಂದ ರು.45 ಲಕ್ಷದವರೆಗೆ ಹಣ ಬಿಡುಗಡೆ ಮಾಡಲಾಗಿದೆ. ರಸ್ತೆ ಅಭಿವೃದ್ಧಿಗೆ ಪ್ರತಿ ತಾಲೂಕಿಗೆ ರು.30 ಲಕ್ಷದಿಂದ ರು.2 ಕೋಟಿವರೆಗೂ ಅನುದಾನ ಕೊಡುತ್ತಿದ್ದೇವೆ. ತಾಲೂಕಿನಲ್ಲಿ ಅಸ್ತಿತ್ವದಲ್ಲಿರುವ ಕಾರ್ಯಪಡೆ ಮೂಲಕ ಯೋಜನೆ ಅನುಷ್ಠಾನಕ್ಕೆ ತರಲಾಗುವುದು ಎಂದು ವಿಧಾನಸೌಧದಲ್ಲಿ ಎಚ್.ಕೆ.ಪಾಟೀಲ್ ಶುಕ್ರವಾರ ಹೇಳಿದರು.

ಕೆಲ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಾಗಿದ್ದರೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದೆ. ಕಾರ್ಯಪಡೆ ಮೂಲಕ ಕೊಳವೆಬಾವಿ ಕೊರೆಯುವುದು, ನೀರಿನ ಪೈಪ್ ಅಳವಡಿಕೆ ಹಾಗೂ ನೀರು ಸರಬರಾಜು ಚಟುವಟಿಕೆಯನ್ನು ಈ ಅನುದಾನದಿಂದ ಮಾಡಬಹುದಾಗಿದೆ. ರಾಜ್ಯ ಸರ್ಕಾರ ಈ ಹಿಂದೆ ಬಿಡುಗಡೆ ಮಾಡಿರುವ ಹಣವನ್ನು ಬಳಕೆ ಮಾಡಿರುವ ಮಾಹಿತಿ ಪಡೆದು ಈ ಅನುದಾನ ಕಾರ್ಯಪಡೆಗೆ ದೊರೆಯಲಿದೆ.

ರಾಜ್ಯದಲ್ಲಿರುವ 1.55 ಲಕ್ಷ ಕಿಮೀ ಗ್ರಾಮೀಣ ರಸ್ತೆ ಅಭಿವೃದ್ಧಿ ಹಾಗೂ ದುರಸ್ತಿ ಮಾಡಬೇಕಿದೆ. ಡಾಂಬರ್ ರಸ್ತೆ ದುರಸ್ತಿಗೆ ಪ್ರತಿ ಕಿಮೀಗೆ ರು.12 ಸಾವಿರ, ಜೆಲ್ಲಿ ರಸ್ತೆ ಪ್ರತಿ ಕಿಮೀಗೆ ರು.7 ಸಾವಿರ ಹಾಗೂ ಮಣ್ಣು ರಸ್ತೆಗೆ ಪ್ರತಿ ಕಿಮೀಗೆ ರು.6 ಸಾವಿರ ನೀಡಲಾಗುತ್ತದೆ. ಈ ಯೋಜನೆಗೆ ಸಂಬಂಧಿಸಿದ ಹಣವನ್ನು ಮೇ 5ರಂದು ಬಿಡುಗಡೆ ಮಾಡಲಾಗಿದೆ ಎಂದರು.

ಬಜೆಟಲ್ಲಿ ಹೇಳಿದಂತೆ ಜಿಲ್ಲಾ ಯೋಜನಾ ಸಮಿತಿಗಳ ಕಾರ್ಯ ವಿಧಾನ ಹಾಗೂ ಬೇರು ಮಟ್ಟದ ಯೋಜನಾ ಪರಿಶೀಲನೆಗೆ ರಾಜ್ಯ ಮಟ್ಟದಲ್ಲಿ ಕಾರ್ಯಪಡೆ ರಚಿಸಿ ಸರ್ಕಾರ ಆದೇಶಿಸಿದೆ. ಗ್ರಾಮೀಣಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ಅಸ್ತಿತ್ವಕ್ಕೆ ಬಂದಿದ್ದು, ಇನ್ನೂ 13 ಸದಸ್ಯರು ಜತೆಗಿರುತ್ತಾರೆ. ಈ ಪಡೆಯು ತ್ರೈಮಾಸಿಕ ಸಭೆ ನಡೆಸಿ ಯೋಜನೆಗಳ
ಪರಿಶೀಲನೆ ನಡೆಸಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com