ಮತ್ತೆ ಡೆಂಘೀ ಕಾಟ ಶುರು
ಬೆಂಗಳೂರು: ಮಾರಕ ಡೆಂಘೀ ರೋಗ ಈ ಬಾರಿ ಮುಂಗಾರು ಮಳೆಗೂ ಮುನ್ನವೇ ರಾಜ್ಯದಲ್ಲಿ ಮತ್ತೆ 365 ಮಂದಿಯನ್ನು ಬಾಧಿಸತೊಡಗಿದೆ.
ಪ್ರತಿ ಬಾರಿ ಜೂನ್ ನಂತರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಡೆಂಘೀ ಈ ವರ್ಷ ಮುಂಗಾರು ಪೂರ್ವ ಮಳೆ ಪರಿಣಾಮ ಎಲ್ಲೆಡೆ ವ್ಯಾಪಿಸತೊಡಗಿದೆ. ಕಳೆದ ವರ್ಷ ಇಬ್ಬರನ್ನು ಬಲಿ ತೆಗೆದುಕೊಂಡಿದ್ದ ಡೆಂಘೀ ಸುಮಾರು 300ಕ್ಕೂ ಹೆಚ್ಚು ಜನರನ್ನು ಕಾಡಿತ್ತು. ಆದರೆ, ಈ ವರ್ಷ ಕೇವಲ 5ತಿಂಗಳಲ್ಲಿ ಒಟ್ಟು 3635 ಮಂದಿಗೆ ಡೆಂಘೀ ಇರುವ ಬಗ್ಗೆ ಶಂಕಿಸಲಾಗಿತ್ತು. ಅವರಲ್ಲಿ 365ಮಂದಿಗೆ ರೋಗ ಇರುವುದು ಪತ್ತೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ತೀವ್ರಗತಿಯಲ್ಲೇ ವ್ಯಾಪಿಸುತ್ತಿರುವ ಡೆಂಘೀ ಸುಮಾರು 62ಜನರನ್ನು ಬಾಧಿಸುತಿದೆ. ಅದೇ ರೀತಿ ಬಳ್ಳಾರಿಯಲ್ಲಿ 69 ಮಂದಿಗೆ ನರಳುತ್ತಿದ್ದು, ರಾಯಚೂರಿನಲ್ಲಿ 47 ಜನರಿಗೆ ರೋಗ ಇರುವುದು ದೃಢವಾಗಿದೆ. ಇದಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿಯೂ ಡೆಂಘೀ ಇರುವುದು ಗೊತ್ತಾಗಿದೆ. ಆದರೆ ರೋಗ ಪತ್ತೆ ಪರೀಕ್ಷೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ನಡುವೆ ಗೊಂದಲ ಇರುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಬಗ್ಗೆ ಸರ್ಕಾರಕ್ಕೆ ಸರಿಯಾದ ಮಾಹಿತಿ ಲಭ್ಯವಾಗುತ್ತಿಲ್ಲ.
ಡೆಂಘೀ ಪತ್ತೆ ಹಚ್ಚಲು ಖಾಸಗಿ ಆಸ್ಪತ್ರೆಗಳು ರ್ಯಾಪಿಡ್ ಟೆಸ್ಟ್ ಕಿಟ್‍ಗಳನ್ನು ಬಳಸುತ್ತವೆ. ಈ ವಿಧಾನದಲ್ಲಿ ರೋಗ ಪತ್ತೆ ಶೀಘ್ರ ಹಾಗೂ ಕಡಿಮೆ ದರ ಕೂಡ. ಆದ್ದರಿಂದ ಹೆಚ್ಚಿನ ಖಾಸಗಿ
ಆಸ್ಪತ್ರೆಗಳು ಇದನ್ನೇ ಬಳಸಿ ರೋಗ ಪತ್ತೆ ಮಾಡುತ್ತವೆ. ಹಾಗೆಯೇ ತಕ್ಷಣ ಚಿಕಿತ್ಸೆಯನ್ನೂ ಆರಂಭಿಸುತ್ತವೆ. ಆದರೆ ಸರ್ಕಾರ ಆಸ್ಪತ್ರೆಗಳು ಎಲಿಸಾ ಆಧರಿತ ಐಜಿಎಂ ಪರೀಕ್ಷೆಯಲ್ಲಿ
ಡೆಂಘೀ ಎಂದು ದೃಢವಾಗದ ಹೊರತು ರೋಗಿಗೆ ಡೆಂಘೀ ಇರುವುದನ್ನು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಪತ್ತೆಯಾಗುವ ಡೆಂಘೀ ಪೀಡಿತರ ಸೂಕ್ತ ಮಾಹಿತಿ ನಿಖರವಾಗಿ ಸಿಗುತ್ತಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ