ಮಹಿಳಾ ಸರ್ವರ್‍ಗಳ ಬಳಕೆಗೆ ಬೇಡ ಒಪ್ಪಿಗೆ: ಹೈ ಕೋರ್ಟ್

ನಗರದ ಬಾರ್ ಮತ್ತು ಡಿಸ್ಕೋಥೆಕ್‍ಗಳಲ್ಲಿ ಮಹಿಳಾ ಸರ್ವರ್ ನೇಮಿಸಿಕೊಳ್ಳಲು ನಗರ ಪೊಲೀಸ್ ಆಯುಕ್ತರ ಅನುಮತಿ ಬೇಕಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದ ಬಾರ್ ಮತ್ತು ಡಿಸ್ಕೋಥೆಕ್‍ಗಳಲ್ಲಿ ಮಹಿಳಾ ಸರ್ವರ್ ನೇಮಿಸಿಕೊಳ್ಳಲು ನಗರ ಪೊಲೀಸ್ ಆಯುಕ್ತರ ಅನುಮತಿ ಬೇಕಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ಬಾರ್ ಮತ್ತು ಡಿಸ್ಕೋಥೆಕ್‍ಗಳಲ್ಲಿ ಮಹಿಳಾ ಸರ್ವರ್‍ಗಳನ್ನು ನೇಮಿಸಿಕೊಳ್ಳುವ ಸಂಬಂಧ ನಗರ ಪೊಲೀಸ್ ಆಯುಕ್ತರಿಂದ ಅನುಮತಿ ಪಡೆಯಬೇಕು ಎಂದು ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಆಕಾಂಕ್ಷ ಎಂಟರ್‍ಪ್ರೈಸಸ್ ಸೇರಿ 24 ಮಂದಿ ಹೈಕೋರ್ಟ್‍ನಲ್ಲಿ ಅರ್ಜಿ ದಾಖಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾ.ಆನಂದ ಭೈರಾರೆಡ್ಡಿ ಅವರಿದ್ದ ರಜಾಕಾಲದ ಏಕಸದಸ್ಯ ಪೀಠ, `ಮಹಿಳಾ ಸರ್ವರ್‍ಗಳನ್ನು ನೇಮಿಸಿಕೊಳ್ಳಲು ಅನುಮತಿ ಪಡೆಯಬೇಕು ಎಂದು ಬಾರ್ ಮಾಲೀಕರಿಗೆ ಪೊಲೀಸರು ಒತ್ತಡ ಹೇರುವುದು ಸರಿಯಲ್ಲ. ಸಂವಿಧಾನದ ಪ್ರಕಾರ ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಹಕ್ಕಿದೆ. ಈ ರೀತಿ ನಿಯಮ ಜಾರಿ ಮಾಡುವುದರಿಂದ ಮಹಿಳಾ ಮತ್ತು ಪುರುಷರ ಮಧ್ಯೆ ತಾರತಮ್ಯ ಮಾಡಿ
ದಂತಾಗುತ್ತದೆ. ಅಲ್ಲದೇ ಅವರು ಜೀವನೋ ಪಾಯಕ್ಕಾಗಿ ಮಾರ್ಗ ಕಂಡುಕೊಂಡಿದ್ದು, ಪೊಲೀಸರು ಒತ್ತಡ ಹೇರುವ ಮೂಲಕ ಮಹಿಳೆಯರ ಹಕ್ಕನ್ನು ಹತ್ತಿಕ್ಕಬಾರದು' ಎಂದು ಅಭಿಪ್ರಾಯ ಪಟ್ಟಿದೆ. ಬಾರ್ ಹಾಗೂ ಡಿಸ್ಕೋಥೆಕ್‍ಗಳಲ್ಲಿ ಅನೈತಿಕ ಚಟುವಟಿಕೆ ನಡೆದರೆ ಮಾತ್ರ ಪೊಲೀಸರು ಯಾವುದೇ ಮುಲಾಜಿಲ್ಲದೆ ಸಂಬಂಧಿಸಿದವರ ವಿರುದ್ದ ಕ್ರಮ ಕೈಗೊಳ್ಳ ಬಹುದು ಎಂದು ಸ್ಪಷ್ಟಪಡಿಸಿದೆ

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಹೇಮಂತ್ ರಾಜ್ ವಾದ ಮಂಡಿಸಿ, `ಬಾರ್ ಆರಂಭಿಸುವ ಮುನ್ನ ಅಬಕಾರಿ ಕಾಯ್ದೆ ಅನುಸಾರ ಸಂಬಂಧಿಸಿದ ಪ್ರಾಧಿಕಾರದಿಂದ ಪರವಾನಗಿ ಪಡೆದಿರುತ್ತೇವೆ. ಕರ್ನಾಟಕ ಪೊಲೀಸ್ ಕಾಯ್ದೆ 1963 ಸೆಕ್ಷನ್ 31(6) ಪ್ರಕಾರ ಈ ರೀತೀ ದಾಳಿ ಮಾಡುವ ಅಧಿಕಾರ ಪೊಲೀಸರಿಗೆ ಇಲ್ಲ. ಅಲ್ಲದೇ ಮಹಿಳಾ ಸರ್ವರ್ ನೇಮಕಕ್ಕೆ ಪ್ರತ್ಯೇಕವಾಗಿ ಪರವಾನಗಿ ಪಡೆಯುವ ಅಗತ್ಯವಿಲ್ಲ. ಈ ಕುರಿತು ಮುಖ್ಯ ಪ್ರಕರಣ ನ್ಯಾಯಾಲಯದಲ್ಲಿದ್ದರೂ, ಪೊಲೀಸರು ನಿರಂತರವಾಗಿ ಬಾರ್ ಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ವಿವರಿಸಿದರು.

ಏನಿದು ವಿವಾದ?
ಬಾರ್, ಡಿಸ್ಕೋಥೆಕ್‍ಗಳಲ್ಲಿ ಕಡ್ಡಾಯ ಮಾರ್ಗಸೂಚಿ ಪಾಲಿಸಬೇಕು ಎಂದು 2013 ಜು.3ರಂದು ಅಧಿಸೂಚನೆ ಹೊರಡಿಸಿತ್ತು. ಅದರ ಪ್ರಕಾರ, ಮಹಿಳಾ ಸರ್ವರ್ ಗಳನ್ನು ನೇಮಿಸಿಕೊಳ್ಳಲು ನಗರ ಪೊಲೀಸ್ ಆಯುಕ್ತರಿಂದ ಅನುಮತಿ ಪಡೆಯಬೇಕು. ಮಾತ್ರವಲ್ಲದೇ ಅವರ ವಸ್ತ್ರ ಸಂಹಿತೆ ಸೇರಿದಂತೆ ಇತರೆ ಅಂಶಗಳನ್ನು ಪಾಲಿಸಬೇಕೆಂದು ಸೂಚಿಸಲಾಗಿತ್ತು. ಅದನ್ನೇ ಆಧಾರವಾಗಿಟ್ಟುಕೊಂಡು, ಮಹಿಳಾ ಸರ್ವರ್ ಗಳನ್ನು ನೇಮಿಸಿಕೊಳ್ಳಲು ಪೊಲೀಸರು ಕೆಲವು ಆಕ್ಷೇಪಿಸಿ, ದಾಳಿ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಿ ಅರ್ಜಿ ದಾಖಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com