ಅಡ್ಡಾದಿಡ್ಡಿ ಓಡಿದ ಕಾರು; ಇಬ್ಬರ ಸಾವು, 6 ಜನರಿಗೆ ಗಾಯ

ಅತಿ ವೇಗವಾಗಿ ಚಲಿಸುತ್ತಿದ್ದ ಐಷಾರಾಮಿ ಕಾರು ಚಾಲಕನ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಚಲಿಸಿದ ಪರಿಣಾಮ ನಿಲ್ದಾಣದಲ್ಲಿ ಬಸ್‍ಗಾಗಿ ಕಾಯುತ್ತಿದ್ದ 8 ಮಂದಿ ಮೇಲೆ ಹರಿದು, ಇಬ್ಬರು ಮೃತಪಟ್ಟು 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅತಿ ವೇಗವಾಗಿ ಚಲಿಸುತ್ತಿದ್ದ ಐಷಾರಾಮಿ ಕಾರು ಚಾಲಕನ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಚಲಿಸಿದ ಪರಿಣಾಮ ನಿಲ್ದಾಣದಲ್ಲಿ ಬಸ್‍ಗಾಗಿ ಕಾಯುತ್ತಿದ್ದ 8 ಮಂದಿ ಮೇಲೆ ಹರಿದು, ಇಬ್ಬರು ಮೃತಪಟ್ಟು 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೊಸೂರು ರಸ್ತೆ ಆನೇಕಲ್ ತಾಲೂಕಿನ ಹೆನ್ನಾಗರ ಗೇಟ್ ಬಳಿ ಶನಿವಾರ ಬೆಳಗ್ಗೆ 8.35ರ ಸುಮಾರಿಗೆ ಘಟನೆ ಸಂಭವಿಸಿದೆ. ಚಂದಾಪುರದ ನಿಸರ್ಗ ಅಪಾರ್ಟ್‍ಮೆಂಟ್ ವಾಸಿ ರಾಧಾ ರಾಮಚಂದ್ರ(59), ಇವರ ಸೊಸೆ ಸೌಮ್ಯ(29) ಮೃತರು. ಸೌಮ್ಯಾರ ಮಗಳು ಸಾನ್ವಿ (4), ಕಿತ್ತಗಾನಹಳ್ಳಿ ನಿವಾಸಿಗಳಾದ ವರಲಕ್ಷ್ಮಿ, ಕೊಂಡಪ್ಪ, ಕಾಚನಾಯಕನಹಳ್ಳಿ ನಿವಾಸಿಗಳಾದ ರಾಣಿ, ಗೌರಮ್ಮ ಮತ್ತು ಪಾಪು ಗಾಯಗೊಂಡವರು. ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಚಾಲಕ, ಸಾಫ್ಟ್ ವೇರ್ ಎಂಜಿನಿಯರ್ ಕಾರ್ತಿಕ್(29) ಎಂಬಾತನನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.

ಕೃಷ್ಣಗಿರಿಯಲ್ಲಿರುವ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಕಾರ್ತಿಕ್, ಕೆಲಸದ ಮೇಲೆ ಶನಿವಾರ ಬೆಳಗ್ಗೆ ತನ್ನ ಹೊಂಡಾ ಸಿಟಿ ನೋಂದಣಿ ಸಂಖ್ಯೆ ಟಿಎನ್22 ಸಿಕ್ಯೂ3786 ಕಾರಿನಲ್ಲಿ ಕೋರಮಂಗಲಕ್ಕೆ ತೆರಳುತ್ತಿದ್ದ. ಹೊಸೂರು ರಸ್ತೆ ಹೆನ್ನಾಗರ ಗೇಟ್ ಬಳಿ ಬಂದಾಗ ನಿಯಂತ್ರಣ ಕಳೆದುಕೊಂಡ ಕಾರು ತಾತ್ಕಾಲಿಕ ನಿಲ್ದಾಣದಲ್ಲಿ ಬಸ್‍ಗೆ ಕಾಯುತ್ತಿದ್ದವರ ಮೇಲೆ ಹರಿದಿದೆ. ಡಿಕ್ಕಿ ಹೊಡೆದ ನಂತರ ಕೆಳಗೆ ಬಿದ್ದು ರಾಧಾ ಎಂಬುವರ ತಲೆ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ನೆರವಿಗೆ ಧಾವಿಸಿದ ಆಟೋ ಚಾಲಕರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯ ಮಧ್ಯಾಹ್ನ 12.30ರ
ಸುಮಾರಿಗೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆನಡಾದಲ್ಲಿ ಮೃತರ ಪತಿ
ತಿಪಟೂರು ಮೂಲದ ರಾಧಾ ಅವರ ಪುತ್ರ ರಾಘವೇಂದ್ರ ಸ್ವರೂಪ್ ಹಾಗೂ ಸೊಸೆ ಸೌಮ್ಯಾ ಟೆಕ್ ಮಹೇಂದ್ರ ಕಂಪನಿ ಉದ್ಯೋಗಿಗಳು. ರಾಘವೇಂದ್ರ ಅವರು ಕೆಲಸದ ಮೇಲೆ ಕೆನಡಾಕ್ಕೆ ತೆರಳಿದ್ದಾರೆ. ಹೀಗಾಗಿ ಮಗ ವಾಪಸ್ಸಾಗುವವರೆಗೆ ಸೊಸೆ ಮತ್ತು ಮೊಮ್ಮಗಳ ಜತೆಗಿರಲು ರಾಧಾ ಅವರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದರು. ಕೋರಮಂಗಲದಲ್ಲಿ ವಾಸವಿರುವ ಮಗಳ ಮನೆಗೆ ಹೋಗಲು ಸೊಸೆ ಸೌಮ್ಯಾ ಹಾಗೂ ಮೊಮ್ಮಗಳು ಸಾನ್ವಿ ಜತೆ ರಾಧಾ ಅವರು ಹೆನ್ನಾಗರ ಗೇಟ್ ಬಳಿ ಬಂದು ಬಸ್‍ಗಾಗಿ ಕಾಯುತ್ತಿದ್ದಾಗ ಏಕಾಏಕಿ ನುಗ್ಗಿ ಬಂದ ಕಾರು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತಿ ವೇಗ:

ಡಿಕ್ಕಿ ರಭಸಕ್ಕೆ ಹಲವರು ಮೇಲಕ್ಕೆ ಹಾರಿ ಕೆಳಗೆ ಬಿದ್ದರು. ಕಾರು ಸುಮಾರು 85 ಕಿ.ಮೀಗಿಂತ ಹೆಚ್ಚಿನ ವೇಗದಲ್ಲಿ ಇದ್ದಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಅಸಭ್ಯ ವರ್ತನೆ ಯುವಕನಿಗೆ ಏಟು
ವಿಜಯನಗರ ಅತ್ತಿಗುಪ್ಪೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಾಲಕಿ ಮೈ ಮುಟ್ಟಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರೇ ಹಿಡಿದು ಥಳಿಸಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ತುಮಕೂರು ಜಿಲ್ಲೆ ಯಡಿಯೂರು ಮೂಲದ ರಮೇಶ್ ಹಲ್ಲೆಗೊಳಗಾದವ. ಸ್ನೇಹಿತನನ್ನು ಭೇಟಿ ಮಾಡಲು ಆಗಮಿಸಿದ್ದ ರಮೇಶ್, ಅತ್ತಿಗುಪ್ಪೆ ಬಸ್ ನಿಲ್ದಾಣದಲ್ಲಿ ನಿಂತಿದ್ದ. ಅದೇ ವೇಳೆ ತಂದೆಯೊಂದಿಗೆ ಬಾಲಕಿಯು ನಿಂತಿದ್ದಳು. ಆಕೆಯ ಭುಜವನ್ನು ರಮೇಶ್ ಮುಟ್ಟಿದ್ದಾನೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಂದೆ ಕೂಗಾಡಿದ್ದಾನೆ. ಇದರಿಂದ ಗಲಿಬಿಲಿಗೊಂಡ ರಮೇಶ್ ಅಲ್ಲಿಂದ ಹೊರಡಲು ಮುಂದಾಗಿದ್ದ.

ಈ ವೇಳೆ ಗುಂಪುಗೂಡಿದ ಸಾರ್ವಜನಿಕರು ರಮೇಶ್‍ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಬಟ್ಟೆ ಹರಿದುಹಾಕಿದ್ದಾರೆ. ಬಳಿಕ ಚಂದ್ರ ಬಡಾವಣೆ ಪೊಲೀಸರ ವಶಕ್ಕೆ ನೀಡಿದ್ದಾರೆ.
ಘಟನೆ ಬಗ್ಗೆ ಪೊಲೀಸ್ ಠಾಣೆಗೆ ಬಂದು ಯಾರೂ ದೂರು ನೀಡಿಲ್ಲ. ಕರ್ನಾಟಕ ಪೊಲೀಸ್ ಕಾಯ್ದೆ ಅನ್ವಯ ರಮೇಶ್ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಿಟ್ಟು ಕಳುಹಿಸಲಾಗಿದೆ ಎಂದು ಚಂದ್ರ ಬಡಾವಣೆ ಪೊಲೀಸರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com