ನಕಲಿ ನೇಮಕ, ಅನುಭವ ಪ್ರಮಾಣ ಪತ್ರ: ಇಬ್ಬರ ಸೆರೆ

ಅಸ್ತಿತ್ವದಲ್ಲಿಲ್ಲದ ಕಂಪನಿಗಳ ಹೆಸರಿನಲ್ಲಿ ನೇಮಕ ಮತ್ತು ಅನುಭವ ಪ್ರಮಾಣ ಪತ್ರ ಸೃಷ್ಟಿಸಿ ಉದ್ಯೋಗಾಕಾಂಕ್ಷಿಗಳಿಗೆ ನೀಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಸ್ತಿತ್ವದಲ್ಲಿಲ್ಲದ ಕಂಪನಿಗಳ ಹೆಸರಿನಲ್ಲಿ ನೇಮಕ ಮತ್ತು ಅನುಭವ ಪ್ರಮಾಣ ಪತ್ರ ಸೃಷ್ಟಿಸಿ ಉದ್ಯೋಗಾಕಾಂಕ್ಷಿಗಳಿಗೆ ನೀಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಸವೇಶ್ವರ ನಗರದ ಹರೀಶ್(57), ಎಚ್‍ಎಸ್ ಆರ್ ಬಡಾವಣೆಯ ಶ್ರೀನಾಥ್(40) ಬಂಧಿತರು. ಇವರಿಂದ ಸಾವಿರಾರು ನಕಲಿ ನೇಮಕ ಪತ್ರ, ಬಿಡುಗಡೆ ಪತ್ರ, ಅನುಭವ ಪ್ರಮಾಣಪತ್ರ, ಸಂಬಳ ಪ್ರಮಾಣ ಪತ್ರ, ಒಂದು ಲ್ಯಾಪ್‍ಟಾಪ್, ಪ್ರಿಂಟರ್ ಹಾಗೂ 5 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಪೈಕಿ ಹರೀಶ್, ವಿನಯ್ ಎಂಬಾತನ ಜತೆ ಸೇರಿ ಡಾ.ರಾಜ್‍ಕುಮಾರ್ ರಸ್ತೆ, ಪ್ರಕಾಶ ನಗರದಲ್ಲಿ `ಬಿ ಪ್ರ್ಯಾಕ್ಟಿಕಲ್' ಮತ್ತು `ಫಾರ್ ಯು ಮ್ಯಾನ್ ಪವರ್' ಎಂಬ ಉದ್ಯೋಗ ಕೊಡಿಸುವ ಜಾಬ್ ಕನ್ಸಲ್ಟೆನ್ಸಿ ನಡೆಸುತ್ತಿದ್ದ.

ನಾಲ್ಕು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿದ್ದು, ಹೊಸದಾಗಿ ಉದ್ಯೋಗ ಹುಡುಕಿಕೊಂಡು ತಮ್ಮನ್ನು ಸಂಪರ್ಕಿಸುವ ಅಭ್ಯರ್ಥಿಗಳಿಗೆ ಸೃಷ್ಟಿತ ಕಂಪನಿಯ ಹೆಸರಿನಲ್ಲಿ 10ರಿಂದ ರು.15 ಸಾವಿರ ಹಣ ಪಡೆದು ಅನುಭವ ಪ್ರಮಾಣ ಪತ್ರ ನೀಡುತ್ತಿದ್ದರು. ಮತ್ತೊಬ್ಬ ಆರೋಪಿ ಶ್ರೀನಾಥ್ ಎಚ್‍ಎಸ್‍ಆರ್ ಬಡಾವಣೆ 7ನೇ ಸೆಕ್ಟರ್‍ನಲ್ಲಿ ಗ್ಲೋಬಲ್ ಅಸ್ಪೈರ್ ಎಜುಕೇಷನ್ ಕನ್ಸಲ್ಟಿಂಗ್ ಹೆಸರಿನಲ್ಲಿ ಜಾಬ್ ಕನ್ಸಲ್ಟೆನ್ಸಿ ನಡೆಸುತ್ತಿದ್ದ. ಹೊರದೇಶದಲ್ಲಿ ಕೆಲಸ ಕೇಳಿಕೊಂಡು ಬರುವ ನಿರುದ್ಯೋಗಿಗಳಿಗೆ ಹರೀಶ್ ಕುಮಾರ್, ವಿನಯ್ ಅಂಗಡಿ ಸಹಾಯದಿಂದ ನಕಲಿ ಪ್ರಮಾಣ ಪತ್ರಗಳನ್ನು ಒದಗಿಸಿ ಕಂಪನಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೂ ವಂಚಿಸುತ್ತಿದ್ದ. ಆರೋಪಿ ವಿನಯ್ ಎಂಬಾತ ತಲೆಮರೆಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com