
ಬೆಂಗಳೂರು: ಶಾಲೆಯೊಂದರಲ್ಲಿ ಕಂಪ್ಯೂಟರ್ ಗಳನ್ನು ಕದ್ದು, ಬೆರಳಚ್ಚು ಗುರುತಿನಿಂದ ಸಿಕ್ಕಿ ಬೀಳಬಹುದು ಎನ್ನುವ ಕಾರಣಕ್ಕೆ ಶಾಲೆಯ ಕೊಠಡಿಗೆ ಬೆಂಕಿ ಇಟ್ಟು ಸಾಕ್ಷಿ ನಾಶಕ್ಕೆ ಯತ್ನಿಸಿದ ಕಾನೂನು ಸಂಘರ್ಷಕ್ಕೊಳಗಾದ ಇಬ್ಬರು ಬಾಲಕರು ಸೇರಿ ನಾಲ್ವರನ್ನು ಜಗಜೀವನರಾಮ್ ನಗರ ಪೊಲೀಸರು ಬಂಧಿಸಿದ್ದಾರೆ.
ಜಗಜೀವನರಾಮ್ ನಗರ ನಿವಾಸಿಗಳಾದ ತೌಸಿಫ್ ಅಹ್ಮದ್(20) ಗೌಸ್(19) ಬಂಧಿತರು. ಇವರೊಂದಿಗೆ 15 ಮತ್ತು 16 ವರ್ಷದ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಬಂಧಿಸಲಾಗಿದೆ. ಇವರಿಂದ 5 ಕಂಪ್ಯೂಟರ್‍ಗಳು, 1 ಜೆರಾಕ್ಸ್ ಯಂತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿನ ಪಾದರಾಯನಪುರದಲ್ಲಿರುವ ಸುಭಾಷ್ ಮೆಮೋರಿಯಲ್ ಇಂಗ್ಲಿಷ್ ಶಾಲೆಗೆ ಶನಿವಾರ ನಸುಕಿನ 3 ಗಂಟೆಗೆ ನುಗ್ಗಿದ ಆರೋಪಿಗಳು, ರೆಕಾರ್ಡ್ ಕೊಠಡಿಯ ಬಾಗಿಲು ಮುರಿದು ಒಳಪ್ರವೇಶಿಸಿ ಕಂಪ್ಯೂಟರ್‍ಗಳನ್ನು ಕಳವು ಮಾಡಿದ್ದರು. ಪರಾರಿಯಾಗುವ ಮುನ್ನ ಆರೋಪಿಯೊಬ್ಬನಿಗೆ ಬೆರಳಚ್ಚು ಗುರುತಿನಿಂದ ತಾವು ಸಿಕ್ಕಿ ಬೀಳಬಹುದು ಎನ್ನುವ ಆಲೋಚನೆ ಬಂತು.
ತಕ್ಷಣವೇ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದರು. ಬೆಂಕಿ ಇಡೀ ಕಚೇರಿಗೆ ಹೊತ್ತಿಕೊಂಡು 19 ಕಂಪ್ಯೂಟರ್ ಗಳು, ಸಿಸಿ ಕ್ಯಾಮೆರಾ ಕೇಬಲ್‍ಗಳು ಹಾಗೂ ಇತರ ದಾಖಲೆಗಳು ಸುಟ್ಟು ಹೋಗಿದ್ದವು. ಬೆಂಕಿ ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು, ಶಾಲೆಯ ಮುಖ್ಯಸ್ಥ ಹುಮಾಯಾನ್‍ಗೆ ತಿಳಿಸಿದ್ದರು. ಅವರು ಮುಖ್ಯ ಶಿಕ್ಷಕಿ ಸಾರಾ ಬೇಗಂ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಶಾಲೆಗೆ ಆಗಮಿಸಿದ ಸಾರಾ ಬೇಗಂ ಬೆಂಕಿ ಹೊತ್ತಿಕೊಂಡು ಹಲವು ವಸ್ತುಗಳು ಸುಟ್ಟು ಹೋಗಿರುವ ಜತೆಗೆ ಕೆಲ ಕಂಪ್ಯೂಟರ್‍ಗಳು ಕಾಣೆಯಾಗಿರುವುದನ್ನು ಗಮನಿಸಿದ್ದರು. ಹೀಗಾಗಿ ಜಗಜೀವನರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಸಿಸಿಟಿವಿ ನೀಡಿದ ಸುಳಿವು
ಘಟನೆ ನಡೆದ ಶಾಲೆಯಿಂದ ಕೇವಲ 15 ಮೀ. ದೂರದಲ್ಲಿ ಒಂದು ಗೋದಾಮು ಇದ್ದು, ಅದರ ಮುಂಭಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ತನಿಖೆ ಆರಂಭಿಸಿ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದ ವಿಡಿಯೋ ಪರಿಶೀಲಿಸಿದಾಗ ಆರೋಪಿಗಳ ಚಲನವಲನ ಕಂಡು ಬಂದಿದೆ. ಇದರ ಆಧಾರದ ಮೇಲೆ ಆರೋಪಿಗಳಿಗಾಗಿ ಹುಡುಕಾಟ ನಡೆಸಿದಾಗ ಪಾದರಾಯನಪುರದಲ್ಲಿ ಒರ್ವ ಸಿಕ್ಕಿಬಿದ್ದಿದ್ದಾನೆ. ಆತ ನೀಡಿದ ಸುಳಿವಿನ ಮೇರೆಗೆ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಗಜೀವನರಾಮನಗರ ಇನ್ಸ್ ಪೆಕ್ಟರ್ ಸಿದ್ದಲಿಂಗಪ್ಪ ತಿಳಿಸಿದರು.
ಬಂಧಿತರ ಪೈಕಿ ತೌಸಿಫ್ ತಂದೆ ಎಲೆಕ್ಟ್ರಿಕಲ್ ಅಂಗಡಿ ಹೊಂದಿದ್ದು ಅದರಲ್ಲಿ ಕೆಲಸ ಮಾಡುತ್ತಿದ್ದ. ಎಲ್ಲಾ ಆರೋಪಿಗಳು ಪ್ರಾಥಮಿಕ ಹಂತದಲ್ಲೇ ಶಿಕ್ಷಣ ನಿಲ್ಲಿಸಿದ್ದು ಸುಮ್ಮನೆ ಓಡಾಡಿಕೊಂಡಿದ್ದರು. ಕಳವು ಸ್ಥಳಗಳಲ್ಲಿ ಪೊಲೀಸರು ಬೆರಳಚ್ಚು ಗುರುತು ಪಡೆಯುತ್ತಾರೆ. ಅಲ್ಲದೇ ಶ್ವಾನದಳ ಸಿಬ್ಬಂದಿಯು ಆಗಮಿಸುತ್ತಾರೆ. ಇದರಿಂದ ತಾವು ಸಿಕ್ಕಿ ಬೀಳುತ್ತೇವೆ ಎನ್ನುವ ಕಾರಣಕ್ಕೆ ಬೆಂಕಿ ಹಚ್ಚಿದ್ದಾಗಿ ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾರೆ.
Advertisement