
ಬೆಂಗಳೂರು: ಸಿಚುವಾನ್-ಕರ್ನಾಟಕ ಸಹೋದರಿ ಸಂಬಂಧ ರಾಜ್ಯಗಳ ಒಪ್ಪಂದದ ಅನ್ವಯ ಚೀನಾದ ಚೆಂಗ್ಡುವಿನ ಉದ್ಯಮಿಗಳಿಗಾಗಿ ಕೈಗಾರಿಕೆ ಪಾರ್ಕ್ ಆರಂಭಿಸಲು 100 ಎಕರೆ ಭೂಮಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಚೀನಾ ಪ್ರವಾಸದ ಸಂದರ್ಭದಲ್ಲಿ ಸಹೋದರಿ ರಾಜ್ಯ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಕೂಡಲೇ ಸಿಚುವಾನ್-ಚೆಂಗ್ಡು ಆಡಳಿತ ವ್ಯವಸ್ಥೆಯ ನಿಯೋಗವು ರಾಜ್ಯಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ತುಮಕೂರಿನ ನರಸಾಪುರದಲ್ಲಿ ಕೈಗಾರಿಕೆ ಪಾರ್ಕ್ ನಿರ್ಮಿಸಲಾಗುತ್ತದೆ. ಸಿಚುವಾನ್ ಹಾಗೂ ಚೆಂಗ್ಡು ಭಾಗದಿಂದ ಬರುವ ಕೈಗಾರಿಕೆಗಳು ಇಲ್ಲಿ ಪ್ರಾಥಮಿಕವಾಗಿ ಬಂಡವಾಳ ಹೂಡಲಿವೆ. ಚೆಂಗ್ಡು ನಗರ ಪಾಲಿಕೆಯ ಉಪ ಮಹಾನಿರ್ದೇಶಕ ಫಾಂಗ್ ಷಿಂಗ್ ಅವರ ನೇತೃತ್ವದಲ್ಲಿ ಸ್ಥಳೀಯ ಅಧಿಕಾರಿಗಳು ಹಾಗೂ ಉದ್ಯಮಿಗಳ ನಿಯೋಗ ಎರಡು ದಿನದ ಪ್ರವಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿದೆ.
ನಿಯೋಗದಲ್ಲಿ 10ಕ್ಕೂ ಅಧಿಕ ಉದ್ಯಮಿಗಳನ್ನು ಒಳಗೊಂಡ 20 ಜನರು ಆಗಮಿಸಿದ್ದಾರೆ. ಎಫ್ ಕೆಸಿಸಿಸಿಐ, ಬಿಬಿಎಂಪಿ ಜತೆ ಆಡಳಿತಾತ್ಮಕ ವಿಚಾರಗಳನ್ನು ಚರ್ಚಿಸಿದ ನಿಯೋಗ, ಕರ್ನಾಟಕ ಉದ್ಯೋಗ ಮಿತ್ರದ ಅಧಿಕಾರಿಗಳಿಂದಲೂ ಮಾಹಿತಿ ಪಡೆದಿದೆ. ಬಳಿಕ ಇನ್ಫೋಸಿಸ್, ವಿಪ್ರೋ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಹೈದ್ರಾಬಾದ್ ಗೆ ನಿಯೋಗ ತೆರಳಲಿದೆ. ಎಫ್ ಕೆಸಿಸಿಐ ಅಧ್ಯಕ್ಷ ಎಸ್.ಸಂಪತ್‍ರಾಮನ್ ನೇತೃತ್ವದ ತಂಡವನ್ನು ಚೀನಾ ನಿಯೋಗವು ಬುಧವಾರ ಭೇಟಿ ಮಾಡಿ, ರಾಜ್ಯದಲ್ಲಿರುವ ಬಂಡವಾಳ ಅವಕಾಶಗಳ ಬಗ್ಗೆ ಚರ್ಚೆ ನಡೆಸಿದೆ. ಮೂಲಸೌಕರ್ಯಗಳಾದ ರಸ್ತೆ, ಬಂದರು, ವಿಮಾನ ನಿಲ್ದಾಣ ಹಾಗೂ ರೈಲ್ವೆ ಅಭಿವೃದ್ಧಿ ಕುರಿತಂತೆ ಚೀನಾ ನಿಯೋಗ ಆಸಕ್ತಿ ತೋರಿದ್ದು, ಈ ಕುರಿತು ಮಾಹಿತಿ ಪಡೆದಿದ್ದಾರೆ.
ನಿಯೋಗಕ್ಕೆ ಭರವಸೆ
ಭೇಟಿ ಬಳಿಕ ಮಾತನಾಡಿದ ಎಫ್ ಕೆಸಿಸಿಐ ಅಧ್ಯಕ್ಷ ಸಂಪತ್‍ರಾಮನ್, `ಕೈಗಾರಿಕೆ ಪಾರ್ಕ್ ಆರಂಭಿಸಲು 100 ಎಕರೆ ಭೂಮಿ ನೀಡಲು ಸರ್ಕಾರ ಸಮ್ಮತಿಸಿದೆ. ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸೂಚನೆ ಮೇರೆಗೆ ನಿಯೋಗಕ್ಕೆ ಈ ಭರವಸೆ ನೀಡಿದ್ದೇನೆ. ಇನ್ನು ಕೆಲವೇ ತಿಂಗಳಲ್ಲಿ ಮತ್ತೊಮ್ಮೆ ಈ ನಿಯೋಗ ರಾಜ್ಯಕ್ಕೆ ಆಗಮಿಸಲಿದೆ ಎಂದರು. ನಿಯೋಗದಲ್ಲಿ ಸಂಪರ್ಕ, ಹೈಡ್ರೋ ಎಲೆಕ್ಟ್ರಿಕ್ಸ್, ತ್ಯಾಜ್ಯ ನೀರು ಸಂಸ್ಕರಣೆ, ರೇಲ್ವೆ, ರಿಯಲ್ ಎಸ್ಟೇಟ್, ಚರ್ಮ ಹಾಗೂ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಉದ್ಯಮಿಗಳಿದ್ದರು' ಎಂದು ತಿಳಿಸಿದ್ದಾರೆ.
Advertisement