
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿದ್ದ ಅಕ್ರಮ ಲಾಟರಿ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಐಡಿ ಐಜಿ ಮಟ್ಟದ 6 ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಶನಿವಾರಷ್ಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು. ಇದರ ಬೆನ್ನಲ್ಲೆ ಸಿಐಡಿ ಪೊಲೀಸರು ಮತ್ತೆ ಐಜಿ ಮಟ್ಟದ 6 ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಸದ್ಯದಲ್ಲೇ ವಿಚಾರಣೆಗೆ ಒಳಪಡಿಸಲಿದ್ದಾರೆ.
ಎಸ್ಪಿ ಚಂದ್ರಕಾಂತ್ ಸೇರಿದಂತೆ 6 ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದ್ದು, ಇಂದು ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಲಾಟರಿ ದಂಧೆ: ಡಿಜಿಪಿ ಆಪ್ತ ಸಹಾಯಕ ನಾಗರಾಜ್ ಅಮಾನತು
ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಅವರ ಆಪ್ತ ಸಹಾಯಕನಾಗಿದ್ದ ನಾಗರಾಜ್ ಅವರನ್ನು ಲಾಟರಿ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಅಮಾನತುಗೊಳಿಸಲಾಗಿದೆ. ಕೆಲದಿನಗಳ ಹಿಂದೆ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಗಾರ್ಗ್ ಅವರ ಆಪ್ತ ಸಹಾಯಕರಾಗಿ ವರ್ಗಮಾಡಲಾಗಿತ್ತು. ಲಾಟರಿ ದಂಧೆಗೆ ಸಂಬಂಧಿಸಿ ಆರೋಪಿಯೊಬ್ಬನ ಪರವಾಗಿ ದೂರವಾಣಿ ಮೂಲಕ ನಾಗರಾಜು ಮಾತನಾಡಿದ್ದರು. ಈ ವಿಚಾರ ತಿಳಿದ ಪೊಲೀಸ್ ಮಹಾನಿರ್ದೇಶಕರು ವರ್ಗ ಮಾಡಿದ್ದರು. ಆರೋಪಿಯೊಂದಿಗೆ ನಂಟು ಹೊಂದಿರುವ ಆರೋಪ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. ಪಾರಿರಾಜನ್ ಜತೆ ನಂಟು ಹೊಂದಿರುವ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement