ಎಂಜಿನಿಯರಿಂಗ್ ಸೀಟು ದುಬಾರಿ

ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿರುವ ಸರ್ಕಾರಿ ಕೋಟಾ ಸೀಟು ಈ ಬಾರಿ ದುಬಾರಿಯಾಗಿದೆ...
ವಿದ್ಯಾರ್ಥಿಗಳು
ವಿದ್ಯಾರ್ಥಿಗಳು

ಬೆಂಗಳೂರು: ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿರುವ ಸರ್ಕಾರಿ ಕೋಟಾ ಸೀಟು ಈ ಬಾರಿ ದುಬಾರಿಯಾಗಿದೆ. ಸರ್ಕಾರ ಮತ್ತು ಕಾಮೆಡ್-ಕೆ ನಡುವೆ ನಡೆದ ಪರಸ್ಪರ ಒಡಂಬಡಿಕೆ ಯಂತೆ ಎರಡು ಸ್ಲ್ಯಾಬ್‍ಗಳಲ್ಲಿ ಕ್ರಮವಾಗಿ ರು. 45,000-, ರು. 50,000 ಶುಲ್ಕ ನಿಗದಿಯಾಗಿದೆ.

ಸ್ಲ್ಯಾಬ್-1: 2013-14ನೇ ಸಾಲಿನಲ್ಲಿ ಕಾಮೆಡ್-ಕೆ ಸೀಟಿಗೆ ರು. 1.50 ಲಕ್ಷ ಪಡೆದು, ಸರ್ಕಾರಿ ಸೀಟಿಗೆ ರು. 33 ಸಾವಿರದಂತೆ ಪಡೆದುಕೊಂಡಿದ್ದ ಕಾಲೇಜುಗಳಲ್ಲಿ ಈ ಬಾರಿ ಶುಲ್ಕ ರು. 45 ಸಾವಿರವಾಗುವುದು.

ಸ್ಲ್ಯಾಬ್-2: ಕಳೆದ ಸಾಲಿನಲ್ಲಿ ಕಾಮೆಡ್-ಕೆ ಸೀಟಿಗೆ ರು. 1.10 ಲಕ್ಷ ಪಡೆದುಕೊಂಡು, ಸರ್ಕಾರಿ ಸೀಟನ್ನು ರು. 37 ಸಾವಿರಕ್ಕೆ ನೀಡಿದ್ದ ಕಾಲೇಜುಗಳಲ್ಲಿ ರು. 50 ಸಾವಿರ ಶುಲ್ಕವಾಗುವುದು.
ಒಟ್ಟಾರೆ ಮೊದಲ ಸ್ಲ್ಯಾಬ್‍ನಲ್ಲಿ ರು.12 ಸಾವಿರ ಮತ್ತು ಎರಡನೇ ಸ್ಲ್ಯಾಬ್‍ನಲ್ಲಿ ರು.13 ಸಾವಿರ ಶುಲ್ಕ ಹೆಚ್ಚಾಗಿದೆ.

ಹಾಗೆಯೇ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಶೇ.45 ಸೀಟು, ಸರ್ಕಾರಿ ಕೋಟಾವಾಗಿದ್ದು, ಇದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತುಂಬಿಕೊಡಲಿದೆ. ಹಲವು ಸುತ್ತಿನ ಸಭೆಗಳ ನಂತರ ನಡೆದ ಸಭೆಯಲ್ಲಿ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಪ್ರಮುಖರು ಮತ್ತು ಸರ್ಕಾರ ನಡುವೆ ಒಪ್ಪಂದ ಏರ್ಪಟ್ಟಿದೆ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿರುವ ಸೀಟುಗಳ ಶುಲ್ಕ ಪರಿಷ್ಕರಣೆ ಕುರಿತು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಖಾಸಗಿ ವೈದ್ಯ ಮತ್ತು ದಂತವೈದ್ಯ ಕಾಲೇಜುಗಳಲ್ಲಿರುವ ಸರ್ಕಾರಿ ಕೋಟಾ ಸೀಟುಗಳ ಶುಲ್ಕವು ಗುರುವಾರ ನಿಗದಿಯಾಗುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com