
ಬೆಂಗಳೂರು: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಲಾಭ ಗಿಟ್ಟಿಸುವ ಉದ್ದೇಶದಿಂದ ಚರ್ಚ್ ನಡೆಸಲು ಹಾಲ್ ಬಾಡಿಗೆ ನೀಡಿದ್ದ ಮಾಲೀಕನೇ ಅದಕ್ಕೆ ಬೆಂಕಿ ಹಚ್ಚಿರುವ ಘಟನೆ ವಿದ್ಯಾರಣ್ಯಪುರ ಮುಖ್ಯರಸ್ತೆಯಲ್ಲಿ ನಡೆದಿದೆ.
ನರಸೀಪುರದಲ್ಲಿರುವ ತಬೇರಾ ಶನಿವಾರ ನಸುಕಿನಲ್ಲಿ ಕೃತ್ಯ ನಡೆದಿದ್ದು, ಬೆಂಕಿಯಿಂದಾಗಿ ಚರ್ಚ್‍ನ ಒಳಗಿದ್ದ ಲಕ್ಷಾಂತರ ರುಪಾಯಿ ಮೌಲ್ಯದ ಸಂಗೀತ ವಾದ್ಯಗಳು, ಪೋಸ್ಟರ್‍ಗಳು, ಕರ್ಟನ್‍ಗಳು, ಪೀಠೋಪಕರಣಗಳು ಭಸ್ಮವಾಗಿವೆ. ಪ್ರಕರಣ ಸಂಬಂಧ ಕಟ್ಟಡದ ಮಾಲೀಕ ನರಸೀಪುರ ನಿವಾಸಿ ಡಿ.ಕೃಷ್ಣಪ್ಪ ಅಲಿಯಾಸ್ ಬಡ್ಡಿ ಕೃಷ್ಣ ಹಾಗೂ ಹಾಸನ ಮೂಲದ ಸೆಕ್ಯುರಿಟಿ ಗಾರ್ಡ್ ಬಾಲಕೃಷ್ಣ ಎಂಬುವರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಶುಕ್ರವಾರ ಸಂಜೆ 5.30ರ ಸುಮಾರಿಗೆ ಪ್ರಾರ್ಥನೆ ಮುಗಿದ ನಂತರ ಫಾಸ್ಟರ್ ರಾಜರಾಜನ್ ಅವರು ಚರ್ಚ್ ಬಾಗಿಲು ಹಾಕಿಕೊಂಡು ಮನೆಗೆ ಮರಳಿದ್ದರು. ಶನಿವಾರ ನಸುಕಿನ 3ರ ಸುಮಾರಿಗೆ ಕೃಷ್ಣಪ್ಪ ಸೇರಿದಂತೆ ಇತರ ಆರೋಪಿಗಳು ಚರ್ಚ್ ನ ಬಾಗಿಲು ಬೀಗ ಮುರಿದು ಒಳ ಪ್ರವೇಶಿಸಿ ಸಂಗೀತ ವಾದ್ಯಗಳನ್ನು ಧ್ವಂಸಗೊಳಿಸಿ ಸ್ಪೋಟಕ ವಸ್ತು ಇಟ್ಟಿದ್ದರು. ಸ್ಪೋಟದಿಂದ ಬೆಂಕಿ ಹೊತ್ತಿಕೊಂಡ ಬಳಿಕ ಕೃಷ್ಣಪ್ಪನೇ ಅಗ್ನಿಶಾಮಕ ಇಲಾಖೆ,
ಪೊಲೀಸರು ಹಾಗೂ ಪಾಸ್ಟರ್ ರಾಜರಾಜನ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ.
ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ತಾನು ಮಾಡಿರುವ ಈ ಕೃತ್ಯದ ಬಗ್ಗೆ ವಿವರಣೆ ನೀಡಿದ್ದಾನೆ. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಚರ್ಚ್ ಒಳಗೆ ಸ್ಪೋಟಗೊಂಡು ವಸ್ತು ಯಾವುದು ಎನ್ನುವುದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಹಿನ್ನೆಲೆ ಏನು?:
ನರಸೀಪುರದಲ್ಲಿ ಡಿ.ಕೃಷ್ಣಪ್ಪನಿಗೆ ಸೇರಿದ ಎರಡು ಮಹಡಿಯ ಕಟ್ಟಡವಿದೆ. ನೆಲಮಹಡಿಯಲ್ಲಿ ಕೃಷ್ಣಪ್ಪ ಕುಟುಂಬದೊಂದಿಗೆ ವಾಸಿಸುತ್ತಿದ್ದಾನೆ. ಮುಂಭಾಗದಲ್ಲಿರುವ ಮಳಿಗೆಗಳು, ಮೊದ ಲನೇ ಮಹಡಿಯಲ್ಲಿರುವ ಮಳಿಗೆಗಳನ್ನು ಬಾಡಿಗೆಗೆ ನೀಡಿದ್ದಾನೆ. ಎರಡನೇ ಮಹಡಿಯಲ್ಲಿ 11 ವರ್ಷಗಳಿಂದ ಪಾಸ್ಟರ್ ರಾಜರಾಜನ್ ಎಂಬುವರು ಚರ್ಚ್ ನಡೆಸುತ್ತಿದ್ದಾರೆ.ಚರ್ಚ್ ಗೆ ರು.5 ಸಾವಿರ ಬಾಡಿಗೆ ಪಡೆದುಕೊಳ್ಳುತ್ತಿದ್ದ.
ನರಸೀಪುರ 7ನೇ ಮುಖ್ಯರಸ್ತೆಯಲ್ಲಿರುವ ಸೈಟ್ ನೆಬರ್ 54 ಮಾಲೀಕತ್ವದ ವಿಚಾರ ವಿವಾದದಲ್ಲಿದೆ. ಸೈಟ್ ನಲ್ಲಿ 80 ವರ್ಷದ ವೃದ್ಧ ದಂಪತಿ ಶಾರದಮ್ಮ-ಯಲ್ಲಪ್ಪ ತಾತ್ಕಾಲಿಕ ಮನೆ ನಿರ್ಮಿಸಿಕೊಂಡು ವಾಸವಿದ್ದರು. ಸೈಟ್ ನ ಉಸ್ತುವಾರಿ ನೋಡಿಕೊಳ್ಳಲು, ಅತಿಕ್ರಮ ಪ್ರವೇಶ ಮಾಡುವವರಿಂದ ರಕ್ಷಣೆ ಪಡೆಯಲು ಫಯಾಜ್ ಎಂಬಾತನ ಸ್ನೇಹ ಸಂಪಾದಿಸಿದ್ದರು. ಆದರೆ, ಆರೋಪಿ ಕೃಷ್ಣಪ್ಪ ಕೂಡಾ ಆ ಸೈಟ್ ತನ್ನದೆಂದು ಹೇಳುತ್ತಿದ್ದ, ಸದ್ಯ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಕೃಷ್ಣಪ್ಪ ವಿವಾದಿತ ಸ್ಥಳದಲ್ಲಿ ಮನೆ ಕಟ್ಟಿಸಲು ಮುಂದಾಗಿದ್ದ. ಆದರೆ, ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಕಟ್ಟಡ ನಿರ್ಮಾಣಕ್ಕೆ ದಂಪತಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆಸ್ತಿಯ ಮೇಲೆ ಪ್ರಾಬಲ್ಯ ಸಾಧಿಸುವ ಉದ್ದೇಶ ಹೊಂದಿದ್ದ ಕೃಷ್ಣಪ್ಪ, ವೃದ್ಧ ದಂಪತಿ ಹಾಗೂ ಅದನ್ನು ನೋಡಿಕೊಳ್ಳುತ್ತಿದ್ದ ಫಯಾಜ್ ಎಂಬುವರನ್ನು ಜೈಲಿಗೆ ಕಳುಹಿಸುವ ಸಂಚು ರೂಪಿಸಿದ. ತಾನು ಬಾಡಿಗೆ ನೀಡಿದ್ದ ಚರ್ಚಿಗೆ ಬೆಂಕಿ ಹೆಚ್ಚಲು ಮುಂದಾಗಿದ್ದ. ಅದಕ್ಕಾಗಿ ತನ್ನ ಕಟ್ಟಡಕ್ಕೆ ಸೆಕ್ಯುರಿಟಿ ಗಾರ್ಡ್ ಆಗಿದ್ದ ಬಾಲಕ ಕೃಷ್ಣ ಹಾಗೂ ಇತರರ ನೆರವು ಪಡೆದಿದ್ದ.
ಆಸ್ತಿ ವಿಚಾರವಾಗಿ 2014ರ ಸೆಪ್ಟೆಂಬರ್‍ನಲ್ಲಿ ತನ್ನ ಕತ್ತು ಹಿಸುಕಿ ಕೃಷ್ಣಪ್ಪ ಕೊಲೆಗೆ ಯತ್ನಿಸಿದ್ದಾನೆ ಎಂದು ಶಾರದಮ್ಮ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದಕ್ಕೆ ಫಯಾಜ್ ಕೂಡಾ ಸಾಕ್ಷಿಯಾಗಿದ್ದ. ಈ ಪ್ರಕರಣದಿಂದ ಹೊರ ಬಂದು, ಆಸ್ತಿ ವಿವಾದದಲ್ಲಿ ಲಾಭಗಿಟ್ಟಿಸಿಕೊಳ್ಳಲು ಕೃಷ್ಣಪ್ಪ ಯೋಜಿಸಿದ್ದ. ಚರ್ಚ್‍ಗೆ ಬೆಂಕಿ ಹಚ್ಚಿದರೆ ದೊಡ್ಡ ಸುದ್ದಿಯಾಗುತ್ತದೆ. ಆ ಆರೋಪವನ್ನು ಶಾರದಮ್ಮ-ಯಲ್ಲಪ್ಪ ದಂಪತಿ ಹಾಗೂ ಫಯಾಜ್ ಮೇಲೆ ಹೊರಸಿದರೆ, ಪ್ರಕರಣ ಗಂಭೀರವಾಗಿ ಎಲ್ಲರೂ ಜೈಲಿಗೆ ಹೋಗುತ್ತಾರೆ. ಆಗ ತಾನು ಆಸ್ತಿಯನ್ನು ಕಬಳಿಸಬಹುದು ಎನ್ನುವ ಸಂಚು ರೂಪಿಸಿದ್ದ
ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.
Advertisement