ಬೆಂಗಳೂರು: ಆಂಧ್ರಪ್ರದೇಶ, ತೆಲಂಗಾಣ ಮತ್ತು ದೇಶದ ಉತ್ತರ ಭಾಗದಲ್ಲಿ ಈ ಬಾರಿ ಬಿಸಿಲಿನ ಆರ್ಭಟ ಜೋರಾಗಿ ರಸ್ತೆಗಳೇ ಕರಗಿ ನೀರಾಗಿ ಹರಿಯುತ್ತಿದ್ದರೆ, ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂಗಾರಿಗೆ ಮುನ್ನವೇ ದಾಖಲೆ ಮಳೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಈ ವರ್ಷ ಮುಂಗಾರು ಪೂರ್ವ 442.6 ಮಿಲಿ ಮೀಟರ್ ಮಳೆಯಾಗಿದೆ. ಇದು ಕಳೆದ 10 ವರ್ಷಗಳಲ್ಲೇ ಅತಿ ಹೆಚ್ಚು ಮಳೆ ಎಂದು ಸೋಮವಾರ ಹವಾಮಾನ ಇಲಾಖೆ ತಿಳಿಸಿದೆ.
ಕೇರಳಕ್ಕೆ ನೈರುತ್ಯ ಮಾನ್ಸೂನ್ ಅಪ್ಪಳಿಸುವ ಮುನ್ನವೇ ಕರ್ನಾಟಕದ ದಕ್ಷಿಣ ಭಾಗದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆ ಮುಂಗಾರು ಪೂರ್ವ ಮಳೆ ಇನ್ನೂ ಎರಡು ದಿನ ಮುಂದುವರಿಯಲಿದೆ. ವಿಶೇಷವಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಕನಿಷ್ಠ ಉಷ್ಠಾಂಶ 22.5 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 32.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಮುಂಗಾರು ಪೂರ್ವ ದಾಖಲೆ ಮಳೆಯಿಂದಾಗಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಗೀಡಾಗಿದೆ. ಬಿರುಗಾಳಿ ಸಹಿತ ಜೋರು ಮಳೆಯಿಂದಾಗಿ ಮರ ಉರುಳಿ ಬಿದ್ದು, ಶೆಡ್ ಕುಸಿದು ಹಲವರು ಮೃತಪಟ್ಟಿದ್ದಾರೆ.
Advertisement