
ಬೆಂಗಳೂರು: ``ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿರುವಂತೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲೂ ಮೂರು ಹಂತದ ವ್ಯವಸ್ಥೆ, ವಾರ್ಡ್ ಸಮಿತಿಗಳಿಗೆ ಸಂಪೂರ್ಣ ಅಧಿಕಾರ, ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚು ಆದ್ಯತೆ, ಅಸಂಘಟಿತ ಕಾರ್ಮಿಕರು ಹಾಗೂ ಬೀದಿ ವ್ಯಾಪಾರಿಗಳ ಅವಶ್ಯಕತೆಗಳ ಪೂರೈಕೆ.
'' ಇದು ರಾಜಧಾನಿಯ ಅಭಿವೃದ್ಧಿಗಾಗಿ ನಾಗರಿಕ ಸಮಾಜ ವೇದಿಕೆ ಸಿದ್ಧಪಡಿಸಿರುವ ಪ್ರಣಾಳಿಕೆಯ ಯಾದಿ. `ಸಿವಿಕ್', `ಅಪ್ಸ', `ನಮ್ಮ ಬೆಂಗಳೂರು ಪ್ರತಿಷ್ಠಾನ' ಸೇರಿದಂತೆ ಹಲವು ಸಂಘಟನೆಗಳನ್ನೊಳಗೊಂಡ `ನಾಗರಿಕ ಸಮಾಜ ವೇದಿಕೆ' ಸೋಮವಾರ ಬಿಬಿಎಂಪಿಗೆ ಪ್ರಣಾಳಿಕೆ ಸಲ್ಲಿಸಿತು. `ಸಿವಿಕ್' ಸಂಸ್ಥೆಯ ಕಾತ್ಯಾಯಿನಿ ಚಾಮರಾಜ್, `ಅಪ್ಸ'ದ ಪಿ.ಲಕ್ಷ್ಮೀಪತಿ,`ಕೇರ್' ಸಂಸ್ಥೆಯ ಆರ್.ಮನೋಹರ್ ಅವರು ಮೇಯರ್ ಮಂಜುನಾಥ ರೆಡ್ಡಿ ಅವರಿಗೆ ಪ್ರಣಾಳಿಕೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮೇಯರ್ ಮಂಜುನಾಥ ರೆಡ್ಡಿ, ``8 ವರ್ಷಗಳಿಂದ ಬಿಬಿಎಂಪಿಯಲ್ಲಿ ಲೆಕ್ಕಪತ್ರ ಹಾಗೂ ಆಡಳಿತ ವರದಿ ಮಂಡನೆಯಾಗದೆ ಜನರಿಗೆ ಮೋಸವಾಗಿದೆ. ಇನ್ನು 3 ತಿಂಗಳಲ್ಲಿ ವರದಿ ಮಂಡಿಸಲಾಗುವುದು. ಲೆಕ್ಕಪತ್ರ ವಿಭಾಗದಲ್ಲಿ ಇದಕ್ಕಾಗಿ ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಲಾಗಿದೆ. ಕಸ ವಿಲೇವಾರಿಗಾಗಿ ಆಟೋ-ಟಿಪ್ಪರ್ ನೀಡಲಾಗಿದೆ. ಆದರೆ ಅಧಿಕಾರಿ ಹಾಗೂ ಗುತ್ತಿಗೆದಾರರ ತಪ್ಪಿನಿಂದ ವಾಹನಗಳು ಕಡಿಮೆಯಿದೆ ಎನ್ನಲಾಗುತ್ತಿದೆ. ಕಸ ವಿಲೇವಾರಿಯಾದ ಬಳಿಕ ಸ್ಥಳೀಯರ ಸಹಿ ಪಡೆಯುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಜಲಮಂಡಳಿ, ಬೆಸ್ಕಾಂ ಸಂಸ್ಥೆಗಳು ಸ್ವತಂತ್ರವಾಗಿದ್ದು, ಇವುಗಳ ತಪ್ಪನ್ನೂ ಬಿಬಿಎಂಪಿಗೆ ಮೇಲೆ ಹೊರಿಸುವುದು ಸರಿಯಲ್ಲ,''ಎಂದರು.
ಈ ವೇಳೆ ಭೂ ಒತ್ತುವರಿ ಕುರಿತು ಪ್ರಶ್ನಿಸಿದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ``ಕೆರೆ ಒತ್ತುವರಿ ತೆರವು ಬಿಬಿಎಂಪಿ ಜವಾಬ್ದಾರಿಯಲ್ಲ ಎನ್ನಬಾರದು. ಜಿಲ್ಲಾಧಿಕಾರಿಯೇ ಎಲ್ಲ ಒತ್ತುವರಿಯನ್ನೂ ತೆರವು ಮಾಡಬೇಕು ಎಂಬ ಧೋರಣೆ ಸರಿಯಲ್ಲ,'' ಎಂದು ಕಿವಿ ಮಾತು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಮಂಜುನಾಥ ರೆಡ್ಡಿ, ``ಕೆರೆಗಳನ್ನು ಬಿಬಿಎಂಪಿ ಸಮರ್ಪಕವಾಗಿ ನಿರ್ವಹಿಸುತ್ತಿದೆ. ಕೆರೆ ಸಂರಕ್ಷಣೆ ವಿಚಾರದಲ್ಲಿ ಸಂಸ್ಥೆಗಳು ಪರಸ್ಪರ ದೂರುವ ಬದಲು ಒಂದೇ ಇಲಾಖೆ ನಿರ್ವಹಣೆಗೆ ನೀಡಬೇಕು,'' ಎಂದರು. ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ನಮ್ಮ ಬೆಂಗಳೂರು ಪ್ರತಿಷ್ಠಾನದ ಶ್ರೀಧರ್ ಪಬ್ಬಿಸೆಟ್ಟಿ ಸೇರಿದಂತೆ ಹಲವರು ಹಾಜರಿದ್ದರು.
Advertisement