ಪಟ ಹಾರಿಸುತ್ತಿದ್ದ ಬಾಲಕನ ಮೇಲೆ ಹರಿಯಿತು ಕಸದ ಲಾರಿ

ಮೈದಾನದಲ್ಲಿ ಗಾಳಿಪಟ ಹಾರಿಸುವಾಗ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಸಿಲುಕಿ ಖಾಸಗಿ ಶಾಲೆಯ 8ನೇ ತರಗತಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮೈದಾನದಲ್ಲಿ ಗಾಳಿಪಟ ಹಾರಿಸುವಾಗ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಸಿಲುಕಿ ಖಾಸಗಿ ಶಾಲೆಯ 8ನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ದಾರುಣ ಘಟನೆ ಶಿವಾಜಿನಗರದ ಕಾಕ್ ಬರ್ನ್ ರಸ್ತೆಯಲ್ಲಿ ಶುಕ್ರವಾರ ನಡೆದಿದೆ. 
ಇಲ್ಲಿನ ಬಿಬಿಎಂಪಿ ವಸತಿ ಗೃಹದ ನಿವಾಸಿ ಎನ್.ಕಿಶೋರ್ (11) ಮೃತರು. ಕಾಕ್‍ಬರ್ನ್ ರಸ್ತೆಯ ಬಿಬಿಎಂಪಿ ಮೈದಾನದಲ್ಲಿ ತನ್ನ ಸ್ನೇಹಿತರ ಜತೆ ಕಿಶೋರ್ ಗಾಳಿಪಟ ಹಾರಿಸುವಾಗ ಈ ಅವಘಡ ಸಂಭವಿಸಿದೆ. ಘಟನೆ ಬಳಿಕ ಪರಾರಿಯಾಗಿರುವ ಚಾಲಕನ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ಮೃತ ಕಿಶೋರ್ ಬಿಬಿಎಂಪಿ ನೌಕರ ನಂದಕುಮಾರ್ ಎಂಬುವರ ಪುತ್ರನಾಗಿದ್ದು, ಶಿವಾಜಿನಗರ ಹತ್ತಿರದ ಖಾಸಗಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಶಾಲೆಯಿಂದ ಶುಕ್ರವಾರ ಮನೆಗೆ ಮರಳಿದ ಬಳಿಕ ಆತ, ಸಂಜೆ 5 ಗಂಟೆಯಲ್ಲಿ ಸ್ನೇಹಿತರ ಮೈದಾನಕ್ಕೆ ಗಾಳಿಪಟ ಹಾರಿಸಲು ತೆರಳಿದ್ದ. 
ಇದೇ ವೇಳೆ ಮೈದಾನದಲ್ಲಿ ನಿಲುಗಡೆ ಮಾಡಿದ್ದ ಕಸ ಸಾಗಿಸುವ ಟಿಪ್ಪರ್ ಲಾರಿ ಚಾಲಕ, ವಾಹನವನ್ನು ಮೈದಾನದಿಂದ ಹೊರ ತೆಗೆಯಲು ಹಿಮ್ಮುಖವಾಗಿ ತಿರುವು ತೆಗೆದುಕೊಳ್ಳುತ್ತಿದ್ದ. ಇತ್ತ ಗಾಳಿಪಟ ಹಾರಿಸುತ್ತಾ ಕಿಶೋರ್, ಕಸದ ಲಾರಿ ಹತ್ತಿರಕ್ಕೆ ಹೋಗಿದ್ದಾನೆ. ಆದರೆ ವಿದ್ಯಾರ್ಥಿಯನ್ನು ಗಮನಿಸದ ಚಾಲಕ, ವಾಹನನ್ನು ಹಿಂದಕ್ಕೆ ತೆಗೆದುಕೊಂಡಾಗ ಬಾಲಕನಿಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಕಿಶೋರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com