
ಬೆಂಗಳೂರು; ದಶಕಗಳ ಕಾಲ ಉಲಿದಿದ್ದ ಧ್ವನಿಯೊಂದು ಶಾಶ್ವತವಾಗಿ ಉಡುಗಿಹೋಗಿದೆ. ಲೇಖಕಿ ಹಾಗೂ ಆಕಾಶವಾಣಿಯ ಕಾರ್ಯ ನಿರ್ವಾಹಕಿಯಾಗಿ ಕೆಲಸ ನಿರ್ವಹಿಸಿದ್ದ ಎಚ್.ಎಸ್. ಪಾರ್ವತಿ (81) ಸೋಮವಾರ ನಿಧನರಾಗಿದ್ದಾರೆ. ಅವರು ಪುತ್ರಿ ಡಾ. ಎಂ.ಎಸ್. ವಿದ್ಯಾ ಹಾಗೂ ಪುತ್ರ ಎಂ.ಎಸ್.ರವಿ ಅವರನ್ನು ಅಗಲಿದ್ದಾರೆ.
ಶಾಸ್ತ್ರಿ ನಗರದ ಮನೆಯಲ್ಲಿ ಪಾರ್ಥಿವ ಶರೀರ ಇಡಲಾಗಿದ್ದು, ಅಮೆರಿಕಾದಲ್ಲಿರುವ ಸಹೋದರ ಬಂದ ನಂತರ ಅಂತ್ಯಕ್ರಿಯೆ ನಡೆಸಲಾಗುವುದು ವಿದ್ಯಾ ತಿಳಿಸಿದ್ದಾರೆ. ಹಿಂದಿ ಭಾಷೆಯಲ್ಲೇ ಹೆಚ್ಚಿನ ವ್ಯಾಸಂಗ ಮಾಡಿದ್ದರೂ ಪಾರ್ವತಿ ಅವರು ಲೇಖಕಿ ಹಾಗೂ ಅನುವಾದಕಿಯಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಲವು ಪ್ರಶಸ್ತಿಗಳಿಗೂ ಭಾಜನರು.
ಆಕಾಶವಾಣಿ ನಿರೂಪಕಿ: ಪಾರ್ವತಿ ಅವರು, ಬೆಂಗಳೂರು ಹಾಗೂ ಮೈಸೂರು ಆಕಾಶವಾಣಿಗಳಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಕಾರ್ಯನಿರ್ವಹಿಸಿದ್ದರು.
1958ರಲ್ಲಿ ಆಕಾಶವಾಣಿ ಬೆಂಗಳೂರು ವಿಭಾಗದಲ್ಲಿ ಉದ್ಯೋಗ ಪಡೆದ ಅವರು ಭಾಷಾಂತರ ಪರಿಣತರಾಗಿದ್ದರು. ಮಕ್ಕಳಿಗಾಗಿ ರೂಪಿಸಲಾದ `ಕೇಳಿ ಗಿಳಿಗಳೇ', ಕನ್ನಡದ ಕವಿಗಳ ಕುರಿತ ಚಿಂತನ, ಹೀಗೆ ಹಲವು ಕಾರ್ಯಕ್ರಮಗಳು ಪಾರ್ವತಿಯವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದಿದ್ದವು. 1990ರಲ್ಲಿ ಅವರು ಸ್ವಯಂ ನಿವೃತ್ತಿ ಪಡೆದರು.
Advertisement