
ಹಾಸನ: ಟಿಪ್ಪು ಜಯಂತಿಗೆ ಸಂಬಂಧಿಸಿದಂತೆ ಎದ್ದಿದ್ದ ವಿವಾದದಲ್ಲಿ ಎರಡು ದಿನಗಳಿಂದ ಗಲಭೆ, ಹಿಂಸಾಚಾರದಿಂದ ನಲುಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಮತ್ತೆ ವ್ಯಕ್ತಿಯೊಬ್ಬರ ಮೇಲೆ ಚೂರಿ ಇರಿದ ಪ್ರಕರಣ ಬೆಳಕಿಗೆ ಬಂದಿದೆ.
ಉಳ್ಳಾಲದಲ್ಲಿ ಶನಿವಾರ ಬಸ್‍ವೊಂದಕ್ಕೆ ಕಲ್ಲು ತೂರಾಟ ನಡೆದಿದ್ದು, ಹಾಸನ ಶಾಂತವಾಗಿದ್ದು, ನ. 16ರವರೆಗೆ ನಿಷೇಧಾಜ್ಞೆ ಮುಂದುವರಿಯಲಿದೆ. ಉಳ್ಳಾಲ ಠಾಣೆ ವ್ಯಾಪ್ತಿಯ ಪಂಡಿತ್‍ಹೌಸ್ ಸಮೀಪ ಬಬ್ಬುಕಟ್ಟೆ ಎಂಬಲ್ಲಿ ಬೈಕ್‍ನಲ್ಲಿ ತೆರಳುತ್ತಿದ್ದ ಧಿೀರಜ್ ಎಂಬುವರಿಗೆ ಚೂರಿಯಿಂದ ಇರಿಯಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ಬೈಕ್‍ನಲ್ಲಿ ಬಂದ ಇಬ್ಬರು ಕೃತ್ಯ ಎಸಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದು, ಉಳಿದ ವಿವರ ನೀಡಲು ನಿರಾಕರಿಸಿದ್ದಾರೆ. ಶನಿವಾರ ಬೆಳಗ್ಗೆ ಉಳ್ಳಾಲದಲ್ಲಿ ಖಾಸಗಿ ಬಸ್‍ವೊಂದರ ಮೇಲೆ ಕಲ್ಲು ತೂರಲಾಗಿದ್ದು, ಗಾಜುಗಳು ಪುಡಿಯಾಗಿವೆ. ಉಳ್ಳಾಲದಲ್ಲಿ ಹಲ್ಲೆಗೊಳಗಾಗಿದ್ದ ಇಕ್ಬಾಲ್ ಮಂಗಳೂರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ನಾಕಾಬಂದಿ: ಬಂಟ್ವಾಳ ತಾಲೂಕಲ್ಲಿ ನಿಷೇಧಾಜ್ಞೆ ಮುಂದುವರಿದಿದ್ದು, ಅಲ್ಲಲ್ಲಿ ನಾಕಾಬಂದಿ ಹಾಕಲಾಗಿದೆ. ಶುಕ್ರವಾರ ಬಂದ್ ವೇಳೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ಶನಿವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
11 ಮಂದಿ ಬಂಧನ: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಸವಣೂರಿನಲ್ಲಿ ಶುಕ್ರವಾರ ಬಂದ್ ವೇಳೆ ಕರ್ತವ್ಯನಿರತ ಎಸ್‍ಐ ರವಿ ಅವರ ಮೇಲೆ ಕಲ್ಲು ತೂರಾಟ ನಡೆಸಿ, ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸರು ಶನಿವಾರ 11 ಮಂದಿ ಬಂಧಿಸಿದ್ದಾರೆ.
ಚೇತರಿಕೆ: ದಕ್ಷಿಣ ಕನ್ನಡ ಜಿಲ್ಲಾ ಬಂದ್ ವೇಳೆ ನಡೆದ ಹಿಂಸಾಚಾರದಲ್ಲಿ ಚೂರಿ ಇರಿತಕ್ಕೊಳಗಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರೂ ಚೇತರಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಹಲ್ಲೆ ನಡೆಸಿರುವ ಆರೋಪಿಗಳಿಗಾಗಿ ಪೊಲೀಸರು ತನಿಖೆ ಮತ್ತು ಶೋಧ ಚುರುಕುಗೊಳಿಸಿದ್ದಾರೆ. ಶುಕ್ರವಾರ ರಾತ್ರಿ ಉಪ್ಪಿನಂಗಡಿಯಲ್ಲಿ ಮೂವರಿಗೆ ವಿದೇಶದಿಂದ ಜೀವ ಬೆದರಿಕೆ ಕರೆಗಳು ಬಂದಿದ್ದು, ಪ್ರಕರಣ ದಾಖಲಾಗಿದೆ.
ಬಿಗಿ ಬಂದೋಬಸ್ತ್: ಬಂದ್ ಮುಗಿದರೂ ಮುನ್ನೆಚ್ಚರಿಕೆ ಕ್ರಮವಾಗಿ ದ.ಕ. ಜಿಲ್ಲೆಯ ಎಲ್ಲೆಡೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ತುಕಡಿಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ. ಅಲ್ಲದೆ, ಪ್ರಚೋದನಕಾರಿ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
ಹಾಸನ ಶಾಂತ: ಹಾಸನದಲ್ಲಿ ಜನಜೀವನ ಎಂದಿನಂತೆ ಆರಂಭವಾಗಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ. ನ16ರವರೆಗೆ ನಿಷೇಧಾಜ್ಞೆ ಮುಂದುವರಿದಿದ್ದು, ಪರಿಸ್ಥಿತಿ ನೋಡಿ ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ. ಶುಕ್ರವಾರದ ಗಲಭೆಗೆ ಸಂಬಂಧಿಸಿ 12 ಮಂದಿಯನ್ನು ಬಂಧಿಸಿದ್ದು, 10 ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Advertisement