
ಬೆಂಗಳೂರು: ದೀರ್ಘ ಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿರುವವರಿಗೆ ಆಯುರ್ವೇದ ಚಿಕಿತ್ಸೆ ನೀಡಿ ರೋಗ ಗುಣಮುಖಪಡಿಸುವುದಾಗಿ ನಂಬಿಸಿ, ನಕಲಿ ಔಷಧಗಳನ್ನು ನೀಡಿ ಹಣ ಪಡೆದು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕಟ್ಟಿ ಹಾಕಿ ಸಾರ್ವಜನಿಕರು ಥಳಿಸಿದ್ದಾರೆ.
ನಂತರ ಅವರನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ದೊಡ್ಡಬೊಮ್ಮಸಂದ್ರದಲ್ಲಿ ಭಾನುವಾರ ನಡೆದಿದೆ. ಶಿವಮೊಗ್ಗ ನಿವಾಸಿ ಎಂದು ಹೇಳಿಕೊಂಡಿರುವ ರಮೇಶ್ ಹಾಗೂ ಚಿಕ್ಕಬಳ್ಳಾಪುರದ ಕಲ್ಲಯ್ಯ ಬಂಧಿತರು. ಆರೋಪಿಗಳಿಂದ ಆಯುರ್ವೇದ ನಕಲಿ ಔಷಧಗಳು, ಸ್ಟೆತೊಸ್ಕೋಪ್ ವಶಪಡಿಸಿಕೊಂಡಿದ್ದು ಆರೋಪಿಗಳ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇವರು ಬೇರೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದ್ದು ವಿಚಾರಣೆಗೆ ಒಳಪಡಿಸಲಾಗುವುದು ಎಂದು ವಿದ್ಯಾರಣ್ಯಪುರ ಪೊಲೀಸರು ಹೇಳಿದ್ದಾರೆ.
ದೊಡ್ಡಬೊಮ್ಮಸಂದ್ರ ನಿವಾಸಿ ಪುಟ್ಟಮಾರಮ್ಮ (70) ಎಂಬುವರು ಪಾರ್ಶ್ವವಾಯುವಿಗೆ ತುತ್ತಾಗಿದ್ದು ಕಾಯಿಲೆ ಗುಣಮುಖವಾಗಲಿ ಎಂದು ಇವರ ಪುತ್ರ ಮಹಾದೇವ ಆರೋಪಿಗಳಿಗೆ ರು.25 ಸಾವಿರ ನೀಡಿದ್ದರು. ಹಣ ಪಡೆದ ಆರೋಪಿಗಳು, ನಕಲಿ ಔಷಧ ನೀಡಿ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದರು.
ಅಮಾಯಕರೇ ಗುರಿ: ವೃದ್ಧರು, ಮನೆಯಲ್ಲಿ ಕಡಿಮೆ ಜನರು ಇರುವವರನ್ನೇ ಆರೋಪಿಗಳು ವಂಚಿಸುತ್ತಿದ್ದರು. ಹೀಗಾಗಿ, ಆರೋಪಿಗಳನ್ನು ಹೇಗಾದರೂ ಮಾಡಿ ಹಿಡಿಯಬೇಕು ಎಂದು
ಯೋಚಿಸಿದ ಮಹಾದೇವ, ಮತ್ತೊಂದು ಸಿಮ್ ಖರೀದಿಸಿ ಆರೋಪಿ ಮೊಬೈಲ್‍ಗೆ ಮಿಸ್ ಕಾಲ್ ಮಾಡಿದ್ದರು. ಆರೋಪಿಗಳು ತಾವಾಗಿಯೇ ಕರೆ ಮಾಡಿದ್ದರು. ಈ ವೇಳೆ ಮಹಾದೇವ ಅವರ ಪತ್ನಿ ಮಾತನಾಡಿ, ತನ್ನ ಪತಿಗೆ ಪಾರ್ಶ್ವವಾಯು ಇದ್ದು ಚಿಕಿತ್ಸೆ ಬೇಕಿದೆ ಎಂದಿದ್ದರು.
ಆರೋಪಿಗಳಿಗೆ, ದೊಡ್ಡ ಬೊಮ್ಮಸಂದ್ರ ವಿಳಾಸ ತಿಳಿದಿದ್ದ ಕಾರಣ ತಿಂಡ್ಲು ವಿಳಾಸ ನೀಡಿದ್ದರು. ಅದರಂತೆ ರಮೇಶ ಹಾಗೂ ಕಲ್ಲಯ್ಯ ಇಬ್ಬರು ತಿಂಡ್ಲುವಿಗೆ ಬಂದಾಗ, ಅವರನ್ನು ಹಿಡಿದುಕೊಂಡ ಸ್ಥಳೀಯರು, ದೊಡ್ಡಬೊಮ್ಮ ಸಂದ್ರಕ್ಕೆ ಕರೆತಂದು ಕಂಬಕ್ಕೆ ಕಟ್ಟಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ!: ಮಹಾದೇವ ಅವರ ಪತ್ನಿಯ ಸೋದರಿಗೆ ಮೂರು ತಿಂಗಳ ಹಿಂದೆ ಕೆಲ ವ್ಯಕ್ತಿಗಳು ಬಂದು ಭಿತ್ತಿಪತ್ರ ನೀಡಿದ್ದರು. ಅದರಲ್ಲಿ ಪಾರ್ಶ್ವವಾಯು, ಮೊಣಕಾಲು ನೋವು ಸೇರಿದಂತೆ ವಿವಿಧ ಕಾಯಿಲೆಗಳಿಗೆ ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಚಿಕಿತ್ಸೆ ಎಂದು ಬರೆಯಲಾಗಿತ್ತು. ಇದನ್ನು ನಂಬಿದ ಅವರು, ಮಹಾದೇವ ಅವರಿಗೆ ಭಿತ್ತಿಪತ್ರ ತಲುಪಿಸಿದ್ದರು.
`ಆಗ ನನ್ನ ತಾಯಿ ನಾಗರಬಾವಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿದ್ದರು. ಆಯುರ್ವೇದವನ್ನು ಪ್ರಯತ್ನಿ ಸೋಣವೆಂದು ಅದರಲ್ಲಿದ್ದ ಮೊಬೈಲ್ ಗೆ ಕರೆ ಮಾಡಿದ್ದೆ. ಫೋನ್ ಮಾಡುತ್ತಿದ್ದಂತೆ ಮರುದಿನವೇ ವ್ಯಕ್ತಿಯೊಬ್ಬ ಬಂದು ತಾಯಿಯನ್ನು ನೋಡುವುದಾಗಿ ಹೇಳಿದ್ದ. ಆತನನ್ನು ಆಸ್ಪತ್ರೆಗೆ ಕರೆದೊಯ್ದಿದೆ. ಆಯುರ್ವೇದದಿಂದ ರೋಗ ಗುಣಮುಖವಾಗುತ್ತದೆ ಎಂದಿದ್ದ. ಇದನ್ನು ನಂಬಿದ ನಾವು ಚಿಕಿತ್ಸೆ ವೆಚ್ಚದ ಬಗ್ಗೆ ಮಾತನಾಡಿದೆವು ಎಂದು ಮಹಾದೇವ ಹೇಳಿದರು.
ಮುಂಗಡವಾಗಿ ರು.10 ಸಾವಿರ ಪಡೆದು ನಂತರ ರು.15 ಸಾವಿರ ಪಡೆದು, ಬೆಳ್ಳುಳ್ಳಿ ರಸ, ಬೆಲ್ಲ ಕೊಟ್ಟು ಹಚ್ಚಿಕೊಳ್ಳುವಂತೆ ಹೇಳಿದ್ದ. ಪಾರ್ಶ್ವವಾಯು ಆಗಿರುವ ಜಾಗಕ್ಕೆ ಬೆಲ್ಟ್ ಕಟ್ಟುತ್ತೇನೆ, ಮಸಾಜ್ ಮಾಡುವುದಾಗಿಯೂ ಹೇಳಿದ್ದ. ಆತ ನೀಡಿದ ಔಷಧಗಳಿಂದ ಪಾರ್ಶ್ವವಾಯು ವಾಸಿಯಾಗಲಿಲ್ಲ. ಪೂರ್ಣ ಹಣ ಪಡೆದ ನಂತರ ಮನೆಗೆ ಬಾರದೆ ನಾಳೆ, ನಾಡಿದ್ದು ಎಂದು ಹೇಳಿದವ ಫೋನ್ ಮಾಡಿದರೂ ಎತ್ತುತ್ತಿರಲಿಲ್ಲ. ಹೀಗಾಗಿ, 3 ತಿಂಗಳ ಬಳಿಕ ಬದಲಿ ಸಿಮï ಬಳಸಿ ಆತನಿಗೆ ಕರೆ ಮಾಡಿದ್ದೆ ಎಂದರು ಮಹಾದೇವ್.
Advertisement