ಉಳ್ಳಾಲದಲ್ಲಿ ಬಸ್ ಮೇಲೆ ಕಲ್ಲು

ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ಭಾನುವಾರ ಮಧ್ಯಾಹ್ನ ಖಾಸಗಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಮಂಗಳೂರು; ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ಭಾನುವಾರ ಮಧ್ಯಾಹ್ನ ಖಾಸಗಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಬಸ್ ಕೋಟೆಪುರದಿಂದ ಮಂಗಳೂರಿಗೆ ಬರುತ್ತಿದ್ದಾಗ ಮೊಗವೀರಪಟ್ಣ ಬಳಿ ಪೊದೆಯಿಂದ ಕಲ್ಲು ತೂರಿಬಂದಿದೆ.

ಮುಂಭಾಗದ ಗಾಜು ಪುಡಿಯಾಗಿದ್ದು ಚಾಲಕ ಗಾಯಗೊಂಡಿದ್ದಾರೆ. ಬಸ್ಸಿನಲ್ಲಿದ್ದವರಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಘಟನೆ ಖಂಡಿಸಿ ಖಾಸಗಿ ಬಸ್ ಚಾಲಕರು ಅಪರಾಹ್ನದಿಂದ ಮಂಗಳೂರು-ಉಳ್ಳಾಲ ಮಧ್ಯೆ ಸಂಚಾರ ಸ್ಥಗಿತಗೊಳಿಸಿದ್ದರು. ಮತೀಯ ಸೂಕ್ಷ್ಮ ಪ್ರದೇಶ ಉಳ್ಳಾಲದಲ್ಲಿ ಪರಿಸ್ಥಿತಿ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಮುಂಜಾಗ್ರತಾ ಕ್ರಮವಾಗಿ ಕ್ಷಿಪ್ರ ಕಾರ್ಯಾಚರಣೆ ಪಡೆ, ಕರ್ನಾಟಕ ಮೀಸಲು ಪೊಲೀಸ್ ಪಡೆ ಹಾಗೂ ಸ್ಥಳೀಯ ಪೊಲೀಸ್ ಬಲ ಕರೆಸಿಕೊಳ್ಳಲಾಗಿದೆ.

ಭಾನುವಾರ ಸಂಜೆ ಸೂಕ್ಷ್ಮ ಪ್ರದೇಶಗಳಾದ ಉಳ್ಳಾಲ ಅಬ್ಬಕ್ಕ ವೃತ್ತದಿಂದ ಮೊಗವೀರಪಟ್ಣ, ಕೋಟೆಪುರ, ಕೋಡಿ, ಒಂಭತ್ತುಕೆರೆ, ಮುಕ್ಕಚ್ಚೇರಿ ಪರಿಸರದಲ್ಲಿ ಆರ್‍ಎಎಫ್ ಪಥಸಂಚಲನ ನಡೆಸಿತು. 130 ಮಂದಿಯ ಆರ್‍ಎಎಫ್ ಪಡೆ, ಕೆಎಸ್ ಆರ್‍ಪಿ 3 ಪ್ಲಟೂನ್ ಹಾಗೂ ಇಬ್ಬರು ಡಿಸಿಪಿ, ಎಸಿಪಿಗಳನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗಿದೆ.

ಆರೋಪಿಗಳ ಬಗ್ಗೆ ಮಾಹಿತಿ:
ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಹಳೆಗೇಟು ನಿವಾಸಿ ಹರೀಶ್ ಪೂಜಾರಿ ಹತ್ಯೆ ಹಾಗೂ ಶಮೀವುಲ್ಲಾ ಗೆ ಚೂರಿಯಿಂದ ಇರಿದ ಪ್ರಕರಣಕ್ಕೆ
ಸಂಬಂಧಿಸಿ ಆರೋಪಿಗಳ ಮಾಹಿತಿ ಕಲೆ ಹಾಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಂಕಿತ ನಾಲ್ವರ ನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆಂದು ಗೊತ್ತಾಗಿದೆ. ಆದರೆ ಈ ಮಾಹಿತಿಯನ್ನು ಪೊಲೀಸರು ಸ್ಪಷ್ಟಪಡಿಸಿಲ್ಲ.

ಗಾಯಾಳು ಚೇತರಿಕೆ: ಶನಿವಾರ ರಾತ್ರಿ ಪಂಡಿತಹೌಸ್‍ನ ಬಬ್ಬುಕಟ್ಟೆಯಲ್ಲಿ ಚೂರಿ ಇರಿತಕ್ಕೆ ಒಳಗಾಗಿದ್ದ ಧೀರಜ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಸ್ನೇಹಿತನ ಜತೆ ದ್ವಿಚಕ್ರವಾಹನ
ದಲ್ಲಿ ಹೋಗುತ್ತಿದ್ದಾಗ ಅಪರಿಚಿತರು ಚೂರಿ ಇರಿದು ಪರಾರಿಯಾಗಿದ್ದರು. ಬಳಿಕ ಗಾಯ ಗೊಂಡ ಧೀರಜ್‍ರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಘಟನೆಗೆ ಸಂಬಂಧಿಸಿ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

20ರವರೆಗೆ ಪ್ರತಿಭಟನೆಗೆ ಅವಕಾಶವಿಲ್ಲ: ಜಿಲ್ಲಾಧಿಕಾರಿ

ದ.ಕ. ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ನಿಯಂತ್ರಣದಲ್ಲಿದ್ದು, ಕಳೆದ 24 ಗಂಟೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಜಿಲ್ಲೆಯಲ್ಲಿ ವಿಧಿಸಿದ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಭಾನುವಾರ ರಾತ್ರಿ ಅಂತ್ಯಗೊಳ್ಳುತ್ತಿದೆ. ಆದರೂ ಕೆಲವೊಂದು ಪ್ರದೇಶಗಳಲ್ಲಿ ಬಿಗುವಿನ ವಾತಾವರಣ ಇದೆ.

ಈ ಹಿನ್ನೆಲೆಯಲ್ಲಿ ಸಂಪೂರ್ಣವಾದ ಸಹಜ ವಾತಾವರಣಕ್ಕೆ ಇನ್ನಷ್ಟು ಕಾಲಾವಕಾಶ ಅಗತ್ಯವಿರುವುದರಿಂದ ನ.20ರವರೆಗೆ ಜಿಲ್ಲೆಯಲ್ಲಿ ಯಾವುದೇ ಬಂದ್, ಬಹಿರಂಗ ಸಭೆ, ಜಾಥಾ, ಪ್ರತಿಭಟನೆ, ಮುತ್ತಿಗೆ, ರಾಸ್ತಾರೋಕೋ, ಧರಣಿ ಮತ್ತು ಮುಷ್ಕರ ನಡೆಸುವುದನ್ನು ನಿಷೇಧಿಸಲಾಗಿದೆ. ಅನಿವಾರ್ಯ, ತುರ್ತು ಸಂದರ್ಭಗಳಲ್ಲಿ ಕಾರ್ಯಕ್ರಮ ನಡೆಸುವವರು ಅನುಮತಿಗೆ ಜಿಲ್ಲಾಧಿಕಾರಿಗೆ ಕೋರಿಕೆ ಸಲ್ಲಿಸಬಹುದು. ಈ ಬಗ್ಗೆ ಪರಿಶೀಲಿಸಿ ಜಿಲ್ಲಾಡಳಿತ ಕ್ರಮಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com