ವಿಗ್ರಹ, ಮಂಗಳಸೂತ್ರವನ್ನೇ ಕದ್ದ ಕಳ್ಳರು
ಬೆಂಗಳೂರು: ಮಾಗಡಿ ರಸ್ತೆಯ ಗೋವಿಂದಪುರದಲ್ಲಿರುವ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು, ದೇವಿಯ ವಿಗ್ರಹ ಹಾಗೂ ಮೂರು ಮಂಗಳಸೂತ್ರಗಳನ್ನು ಕದ್ದೊಯ್ದಿದ್ದಾರೆ.
ಶನಿವಾರ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 6 ಗಂಟೆ ನಡುವೆ ಘಟನೆ ನಡೆದಿದೆ. ಈ ಬಗ್ಗೆ ದೇವಸ್ಥಾನದ ಅರ್ಚಕ ಮಂಜುನಾಥ ದೂರು ನೀಡಿದ್ದಾರೆ. ಶನಿವಾರ ರಾತ್ರಿ ಪೂಜೆ ಮುಗಿದ ಬಳಿಕ ದೇವಸ್ಥಾನಕ್ಕೆ ಬೀಗ ಹಾಕಲಾಗಿತ್ತು. ಭಾನುವಾರ ಬೆಳಿಗ್ಗೆ ಆರು ಗಂಟೆಗೆ ಪೂಜೆಗೆ ಬಂದಾಗ ಕಳ್ಳತನವಾಗಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.
ದೇವಸ್ಥಾನದ ಆವರಣದಲ್ಲೇ ಒಂದು ಆಲದ ಮರವಿದೆ. ಮರವನ್ನು ಹಾಗೆಯೇ ಉಳಿಸಿಕೊಂಡು ಸ್ವಲ್ಪ ಜಾಗ ಬಿಟ್ಟು ಛಾವಣಿ ನಿರ್ಮಿಸಲಾಗಿದೆ. ರಾತ್ರಿ ವೇಳೆ ಕಾಂಪೌಂಡ್ ಪಕ್ಕದ ಮರ ಏರಿ ಛಾವಣಿಗೆ ಬಂದಿರುವ ಕಳ್ಳರು, ಅಲ್ಲಿನ ಕಿಂಡಿಯಿಂದ ದೇವಸ್ಥಾನದ ಒಳಗೆ ಇಳಿದು ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಮಂಗಳ ಸೂತ್ರಗಳು ಹಾಗೂ ಪಂಚಲೋಹದ ವಿಗ್ರಹ ಕಳವಾಗಿದೆ. ಅದರ ಮೌಲ್ಯ ಗೊತ್ತಾಗಿಲ್ಲ. ರಾತ್ರಿ 11 ಗಂಟೆವರೆಗೂ ಸ್ಥಳೀಯರು ದೇವಾಲಯದ ಬಳಿಯೇ ಇದ್ದರು. ಹೀಗಾಗಿ ತಡರಾತ್ರಿ ಅಥವಾ ನಸುಕಿನಲ್ಲಿ ಕಳವು ನಡೆದಿರಬಹುದು ಎಂದು ಶಂಕಿಸಲಾಗಿದೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಮಾಗಡಿ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

