
ಮಡಿಕೇರಿ/ಸಿದ್ದಾಪುರ: ಟಿಪ್ಪು ಜಯಂತಿಯಂದು ಮಡಿಕೇರಿಯಲ್ಲಿ ಸಂಭವಿಸಿದ ಗಲಭೆ ಮತ್ತು ಇಬ್ಬರ ಸಾವಿಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಪ್ರಕರಣದ ತನಿಖಾಧಿಕಾರಿಯಾಗಿರುವ ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರು ಸೋಮವಾರ ಮಡಿಕೇರಿಗೆ ಭೇಟಿ ನೀಡಿದ್ದು ತ್ವರಿತ ಗತಿಯಲ್ಲಿ ವಿಚಾರಣೆ ಕೈಗೊಂಡಿದ್ದಾರೆ.
ಇನ್ನೊಂದು ತಿಂಗಳಲ್ಲಿ ಪ್ರಕರಣದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ನಿರೀಕ್ಷೆಯಿದೆ ಎಂದೂ ಶಿಖಾ ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಟಿಪ್ಪು ಜಯಂತಿಯಂದು ಸಂಭವಿಸಿದ ಘರ್ಷಣೆ ಮತ್ತು ಕುಟ್ಟಪ್ಪ, ಸಾಹಿಲ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಿಸಿರುವ ತನಿಖಾಧಿಕಾರಿ ಮೈಸೂರಿನ ಜಿಲ್ಲಾಧಿಕಾರಿ ಶಿಖಾ ಕೊಡಗಿಗೆ ಭೇಟಿ ನೀಡಿದ್ದು, ಗಲಭೆ ಮತ್ತು ಇಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮಿಂಚಿನ ಸಂಚಾರ ಕೈಗೊಂಡು ಮಾಹಿತಿ ಕಲೆ ಹಾಕತೊಡಗಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಖಡಕ್ ಅಧಿಕಾರಿಯದ್ದೇ ಹೆಸರಾಗಿರುವ ಶಿಖಾ, ಮಡಿಕೇರಿ ಬಳಿಯ ನೀರುಕೊಲ್ಲಿಗೆ ಭೇಟಿ ನೀಡಿ ಸಾಹಿಲ್ ಹತ್ಯೆಯಾದ ಸ್ಥಳ ಪರಿಶೀಲಿಸಿದರು. ಕುಟ್ಟಪ್ಪ ಸಾವಿಗೀಡಾದ ಮಡಿಕೇರಿ ಜಿಲ್ಲಾಸ್ಪತ್ರೆಯ ಶವಾಗಾರದ ಬಳಿಯೂ ತೆರಳಿ ಕುಟ್ಟಪ್ಪ ಬಿದ್ದ ಗುಂಡಿಯನ್ನು ಪರಿಶೀಲಿಸಿದರು. ಆ ಬಳಿಕ ಇಗ್ಗೋಡ್ಲು ಗ್ರಾಮದಲ್ಲಿನ ಕುಟ್ಟಪ್ಪ ಮನೆಗೂ ಭೇಟಿ ನೀಡಿ ಕುಟುಂಬದವರೊಂದಿಗೆ ಮಾತನಾಡಿ ಮಾಹಿತಿ ಸಂಗ್ರಹಿಸಿದರು.
ಸಾಹಿಲ್ ಮನೆಗೆ ಭೇಟಿ: ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿಯ ಸಾಹಿಲ್ ಹಮೀದ್ ಮನೆಗೂ ಭೇಟಿ ನೀಡಿದ ತನಿಖಾಧಿಕಾರಿ ಶಿಖಾ ಕುಟುಂಬ ವರ್ಗದವರಿಂದ ಮಾಹಿತಿ ಪಡೆದುಕೊಂಡರು. ಘಟನೆ ನಡೆದ ಸಂದರ್ಭದಲ್ಲಿ ಸಾಹಿಲ್ ಜೊತೆ ಇದ್ದ ಯುವಕನಿಂದ ಮಾಹಿತಿ ಸಂಗ್ರಹಿಸಿದ ಶಿಖಾ, ಮೃತ ಸಾಹಿಲ್‍ನ ತಂದೆಯೊಂದಿಗೂ ಕೆಲ ಕಾಲ ಮಾತನಾಡಿದರು. ಈ ಸಂರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಾಹಿಲ್ ತಂದೆ ನಾಸೀರ್, ``ಮಗನನ್ನು ಕಳೆದುಕೊಂಡು ಕಂಗಾಲಾಗಿರುವೆ. ಪೊಲೀಸರು ಇನ್ನು ಕೂಡ ನನ್ನ ಮಗನ ಕೊಲೆ ಮಾಡಿದವರನ್ನು ಬಂಧಿಸಿಲ್ಲ. ಪೊಲೀಸ್ ತನಿಖೆಯನ್ನು ಮತ್ತಷ್ಟು ಚುರುಕುಗೊಳ್ಳಬೇಕು'' ಎಂದು ಒತ್ತಾಯಿಸಿದರು.
ಬಳಿಕ ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಖಾ, ಇನ್ನೊಂದು ತಿಂಗಳಲ್ಲಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಭರವಸೆ ನೀಡಿದರು. ಶಿಖಾ ಅವರೊಂದಿಗೆ ಕೊಡಗು ಕೊಡಗು ಪ್ರಭಾರ ಜಿಲ್ಲಾಧಿಕಾರಿ ಕೂರ್ಮಾರಾವ್, ಪೊಲೀಸ್ ವರಿಷ್ಠಾಧಿ ವರ್ತಿಕಾ ಕಟಿಯಾರ್, ಮಡಿಕೇರಿಕಾರಿ ತಹಸೀಲ್ದಾರ್ ಕುಂಜ್ಞಮ್ಮ ಇದ್ದರು.
Advertisement