ಲಭ್ಯ ನೀರನ್ನು ಅಗತ್ಯಕ್ಕೆ ತಕ್ಕಂತೆ ಬಳಸಿ: ವಾಲಾ

ನೆರೆಹೊರೆಯ ರಾಜ್ಯಗಳು ನದಿ ನೀರು ಹಂಚಿಕೆ ವಿಚಾರವಾಗಿ ಕಿತ್ತಾಡುವುದು ಸರಿಯಲ್ಲ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅಭಿಪ್ರಾಯಪಟ್ಟರು...
ರಾಜ್ಯಪಾಲ ವಜುಭಾಯಿ ವಾಲಾ (ಸಂಗ್ರಹ ಚಿತ್ರ)
ರಾಜ್ಯಪಾಲ ವಜುಭಾಯಿ ವಾಲಾ (ಸಂಗ್ರಹ ಚಿತ್ರ)

ಬೆಂಗಳೂರು: ನೆರೆಹೊರೆಯ ರಾಜ್ಯಗಳು ನದಿ ನೀರು ಹಂಚಿಕೆ ವಿಚಾರವಾಗಿ ಕಿತ್ತಾಡುವುದು ಸರಿಯಲ್ಲ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅಭಿಪ್ರಾಯಪಟ್ಟರು.

ಕೃಷಿ ವಿಶ್ವವಿದ್ಯಾಲಯವು ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದ ಆವರಣದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ಕೃಷಿ ಮೇಳಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಸ್ತುತ ಸಂದರ್ಭದಲ್ಲಿ ನದಿ ನೀರು ಹಂಚಿಕೆ ವಿಚಾರವಾಗಿ ರಾಜ್ಯ ರಾಜ್ಯಗಳ ನಡುವೆ ಮನಸ್ತಾಪ ಉಂಟಾಗಿದೆ. ದೇಶದ ಎಲ್ಲ ರಾಜ್ಯಗಳಲ್ಲೂ ರೈತರಿದ್ದಾರೆ. ಪ್ರಕೃತಿದತ್ತವಾದ ನದಿ ನೀರು ಎಲ್ಲರಿಗೂ ಸಲ್ಲಬೇಕು. ಲಭ್ಯವಿರುವ ನೀರನ್ನು ಅಗತ್ಯಕ್ಕೆ ಅನುಗುಣವಾಗಿ ಬಳಕೆ ಮಾಡಿಕೊಳ್ಳಬೇಕು. ಕೇವಲ ವಿವಾದ, ಕಿತ್ತಾಟದಿಂದ ಯಾವ ಸಾಧನೆಯೂ ಸಾಧ್ಯವಿಲ್ಲ ಎಂದು ಹೇಳಿದರು.

ಕೆಲ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೃಷಿ ಭೂಮಿ ಮತ್ತು ಜಲಸಂಪತ್ತು ಉತ್ತಮವಾಗಿದೆ. ಹೀಗಾಗಿ ಇಂದಿಗೂ ದೇಶದ ಶೇ.65ರಷ್ಟು ಮಂದಿ ಕೃಷಿ ನಂಬಿ ಬದುಕುತ್ತಿದ್ದಾರೆ. ಆದರೆ, ಇರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಎಲ್ಲೋ ಎಡವುತ್ತಿದ್ದೇವೆ. ಇದರಿಂದ ಕೃಷಿ ಕ್ಷೇತ್ರಕ್ಕೆ ಕೊಂಚ ಹಿನ್ನಡೆಯಾಗಿದೆ. ಇಸ್ರೇಲ್‍ನಲ್ಲಿ ಮಳೆ ನಿಯಮಿತವಾಗಿ ಬೀಳುವುದಿಲ್ಲ. ಆದರೆ, ಸಾಕಷ್ಟು ಹಣ್ಣುಗಳನ್ನು ಉತ್ಪಾದಿಸಿ ವಿದೇಶ ಗಳಿಗೆ ರಫ್ತು ಮಾಡಲಾಗುತ್ತಿದೆ. ನೀರು ಬಳಕೆ ಬಗ್ಗೆ ಆ ದೇಶದ ರೈತರು ಜ್ಞಾನವಂತರಾಗಿದ್ದು, ಲಭ್ಯವಿರುವ ನೀರಿನಲ್ಲಿ ಹೆಚ್ಚಿನ ಉತ್ಪಾದನೆ ಹಾಗೂ ಆದಾಯ ಗಳಿಸುತ್ತಿದ್ದಾರೆ ಎಂದು ತಿಳಿಸಿದರು.

ದೇಶದಲ್ಲಿ ನೀರಿಗೆ ಬರವಿಲ್ಲ. ಎಷ್ಟೋ ನದಿಗಳ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿದೆ. ಹೀಗಾಗಿ ನೀರಿನ ಬಳಕೆ ಬಗ್ಗೆ ರೈತರು ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬೇಕು. ಜಮೀನಿನಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸುವ ಮೂಲಕ ವೈಜ್ಞಾನಿಕವಾಗಿ ನೀರನ್ನು ಬಳಸಬೇಕು. ವಾಟರ್ ಗ್ರಿಡ್ ಯೋಜನೆ ಅಳವಡಿಸಿಕೊಳ್ಳಲು ಮುಂದಾಗಬೇಕು. ಅದೇ ರೀತಿ ರೈತರ ಅಗತ್ಯತೆಗಳನ್ನು ಪೂರೈಸುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.

ತಾಂತ್ರಿಕತೆ ಬಳಕೆಯೂ ಬೇಕು: ಕೃಷಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ರೈತರು ಇಂದಿಗೂ ಸಾಂಪ್ರದಾಯಿಕ ಕೃಷಿ ಪದ್ತಿ ಅನುಸರಿಸುತ್ತಿರುವುದರಿಂದ ಕೃಷಿ ಕ್ಷೇತ್ರಕ್ಕೆ ಕೊಂಚ ಹಿನ್ನಡೆಯಾಗಿದೆ. ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಹೀಗಾಗಿ ರೈತರು ನೂತನ ತಾಂತ್ರಿಕತೆ ಅಳವಡಿಸಿಕೊಂಡಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ರೈತರಿಗೆ ಕೃಷಿ ತಂತ್ರಜ್ಞಾನವನ್ನು ಸಮರ್ಪಕವಾಗಿ ತಲುಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಮುಂದಿನ ದಿನಗಳಲ್ಲಿ ಹೀಗಾಗುವುದಿಲ್ಲ. ರೈತರ ಅಭಿವೃದ್ಧಿಗಾಗಿಯೇ ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದೆ ಎಂದರು. ಕೃಷಿ ವಿವಿ ಕುಲಪತಿ ಡಾ.ಎಚ್. ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com