ನಷ್ಟ ಮಾಡಿದವರಿಂದಲೇ ಹಣ ವಸೂಲಿ: ಕೆ.ಜೆ.ಜಾರ್ಜ್

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಮ್ಯೂಚುಯಲ್ ಫಂಡ್ ಅವ್ಯವಹಾರ ನಡೆಸಿ ನಷ್ಟ ಉಂಟುಮಾಡಿದ ಅಧಿಕಾರಿಗಳಿಂದ ಹಣವನ್ನು ವಸೂಲಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ...
ಬೆಂಗಳೂರು ಅಭಿವೃದ್ಧಿ ಹಾಗೂ ನಗರ  ಯೋಜನಾ ಸಚಿವ ಕೆ.ಜೆ.ಜಾರ್ಜ್
ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನಾ ಸಚಿವ ಕೆ.ಜೆ.ಜಾರ್ಜ್

ವಿಧಾನಪರಿಷತ್ತು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಮ್ಯೂಚುಯಲ್ ಫಂಡ್ ಅವ್ಯವಹಾರ ನಡೆಸಿ ನಷ್ಟ ಉಂಟುಮಾಡಿದ ಅಧಿಕಾರಿಗಳಿಂದ ಹಣವನ್ನು ವಸೂಲಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

ಪ್ರಶ್ನೋತ್ತರ ಅವಧಿಯಲ್ಲಿ ತಾರಾ ಅನುರಾಧಾ ಅವರ ಪ್ರಶ್ನೆಗೆ ಉತ್ತರಿಸಿದ ಬೆಂಗಳೂರು ಅಭಿವೃದ್ಧಿ ಹಾಗೂ ನಗರ  ಯೋಜನಾ ಸಚಿವ ಕೆ.ಜೆ.ಜಾರ್ಜ್, ಸುಮಾರು ರು.2500 ಕೋಟಿಯನ್ನು ಬ್ಯಾಂಕುಗಳಿಂದ ಮ್ಯೂಚುಯಲ್ ಫಂಡ್ ಸಂಸ್ಥೆಗೆ ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಲಾಗಿತ್ತು. ಇಷ್ಟು ಹಣ ವಾಪಸ್ ಬಂದಿದೆ. ಆದರೆ, ಮ್ಯೂಚುಯಲ್ ಫಂಡ್ ಸಂಸ್ಥೆಗೆ ವರ್ಗಾಯಿಸಿದ ಅವಧಿಯಲ್ಲಿನ ಬಡ್ಡಿ ಹಣ ರು.2001 ಕೋಟಿ ಬಿಡಿಎಗೆ ನಷ್ಟವಾಗಿದೆ. ಇದನ್ನು ವಸೂಲಿ ಮಾಡಲಾಗುತ್ತದೆ ಎಂದರು

ಈ ಪ್ರಕರಣದ ಬಗ್ಗೆ ಸಿಐಡಿ ತಂಡ ತನಿಖೆಯನ್ನು ಪ್ರಾರಂಭಿಸಿ ತಪ್ಪಿತಸ್ಥ ಅಧಿಕಾರಿಗಳಾದ ಸಂದೀಪ್ ದಾಸ್, ಎಂ. ಎನ್.ಶೇಷಪ್ಪ, ಬಿ.ಗಂಗಣ್ಣ ಮತ್ತು ವಸಂತ್ ಕುಮಾರ್ ಅವರನ್ನು ಬಂಧಿಸಿದ್ದು, ಅವರೆಲ್ಲಾ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಪೈಕಿ ವಸಂತಕುಮಾರ್ ಪ್ರಾಧಿಕಾರದ ಸಿಬ್ಬಂದಿಯಾಗಿದ್ದು, ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಎಂ.ಎನ್.ಶೇಷಪ್ಪ ಮತ್ತು ಗಂಗಣ್ಣ ಅವರು ನಿವೃತ್ತಿಯಾಗಿದ್ದಾರೆ. ಸಂದೀಪ್ ದಾಸ್ ಕೇಂದ್ರ ಸರ್ಕಾರದ ಸೇವೆಯಲ್ಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯವರ ತನಿಖೆ ಪ್ರಗತಿಯಲ್ಲಿದ್ದು, ತನಿಖೆ ಪೂರ್ಣಗೊಂಡ ನಂತರ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ನಷ್ಟವಾದ ಹಣವನ್ನು ವಸೂಲಿ ಮಾಡಲಾಗುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com