
ಬೆಂಗಳೂರು: ಮೋದಿ ಸರ್ಕಾರ ಮತ್ತೊಂದು ತುರ್ತು ಪರಿಸ್ಥಿತಿ ಸೃಷ್ಟಿ ಮಾಡುವತ್ತ ಹೆಜ್ಜೆ ಹಾಕುತ್ತಿದೆಯೇ ಎಂಬ ಭಯ ದೇಶದ ಪ್ರಜ್ಞಾವಂತರನ್ನು ಕಾಡುತ್ತಿದೆ ಎಂದು ಮಲೆಯಾಳಂನ ಖ್ಯಾತ ಲೇಖಕ ಕೆ. ಸಚ್ಚಿದಾನಂದನ್ ಕಳವಳ ವ್ಯಕ್ತಪಡಿಸಿದರು.
ಸೇವ್ ಇಂಡಿಯ ಭಾನುವಾರ ನಡೆದ ಬೌದ್ಧಿಕ ಸ್ವಾತಂತ್ರ್ಯಕ್ಕಾಗಿ ಐಕ್ಯತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳನ್ನು ಕೇಸರೀಕರಣಕ್ಕೆ ಮಾರ್ಪಡಿಸುವ ಚಟುವಟಿಕೆಗಳು ಜೋರಾಗಿ ನಡೆದಿವೆ. ದೇಶವನ್ನು ಕೋಮುವಾದ ಆಳುತ್ತಿದೆ. ಜರ್ಮನ್ ಹಾಗೂ ಇಟಲಿಯಲ್ಲಾದಂತೆ ನಮ್ಮ ದೇಶದಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕಾಗುತ್ತಿದೆ ಎಂದು ದೂರಿದರು.
ರಾಜನೀತಿಯನ್ನು ಹಿಂದೂಕರಣ ಮಾಡುವ ಗುರಿ ಹೊಂದಲಾಗಿದೆ. ಇದರಿಂದಾಗಿ ಸತ್ಯ ಮಾತನಾಡುವ ಕಲಾವಿದರು, ಸಾಹಿತಿ, ಸಮಾಜ ಸೇವಕರು, ಇತಿಹಾಸಕಾರರ ಮೇಲೆ ಸತತ ದಾಳಿ ನಡೆಯುತ್ತಿದೆ. ಬರಹಗಾರರ ಸ್ವಾತಂತ್ರ್ಯ ಹಾಗೂ ಜೀವ ಅಪಾಯದಲ್ಲಿದ್ದು, ಹಿಂದೂ ಧರ್ಮ ಬಿಟ್ಟು ಬೇರಾವುದೇ ಧರ್ಮಗಳಿಗೆ ಅವಕಾಶವಿಲ್ಲ ದಂತಹ ಪರಿಸ್ಥಿತಿ ಸೃಷ್ಟಿಸಲಾಗಿದೆ. ಹಿಂದೂ ಧೋರಣೆಯ ರಾಜಕಾರಣ ತರಲೇಬೇಕು ಎನ್ನುವ ಶಪಥವನ್ನು ಜಾಲತಾಣದಲ್ಲಿ ಪ್ರತಿಪಾದಿಸುತ್ತಿದ್ದಾರೆ. ಹೀಗಾಗಿ ಸತ್ಯ ಶೋಧಕರ ಮೇಲೆ ಸತತ ದಾಳಿ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಚಿಂತಕ ಡಾ.ರಹಮತ್ ತರೀಕೆರೆ ಮಾತನಾಡಿ, ವಿಚಾರವಾದಿಗಳ ಕೊಲೆಗಾರರನ್ನು ಬಂಧಿಸುವ ಮೊದಲು ಧರ್ಮಗಳಲ್ಲಿನ ಕೊಲೆಗಡುಕ ಚಿಂತಕರನ್ನು ಕಂಡುಹಿಡಿಯಬೇಕು .ಭಾರತೀಯರು ನಮ್ಮಂತಾಗುತ್ತಿದ್ದಾರೆ ಎಂದು ಪಾಕಿಸ್ತಾನದ ಲೇಖಕರೊಬ್ಬರು ಇತ್ತೀಚೆಗೆ ವ್ಯಂಗ್ಯವಾಡಿದ್ದಾರೆ. ಭಾರತ ದೇಶವು ಪಾಕಿಸ್ತಾನ ಹಾಗೂ ಸೌದಿ ಅರೇಬಿಯಾದಂತಹ ಅನಾರೋಗ್ಯಕರ ದೇಶಗಳಂತಾಗಬಾರದು. ಕಲಬುರ್ಗಿ ಸೇರಿದಂತೆ ವಿಚಾರವಾದಿಗಳ ಕೊಲೆಗಾರರನ್ನು ಪೊಲೀಸರು ಹುಡುಕುತ್ತಿದ್ದಾರೆ. ಆದರೆ ಇದಕ್ಕೂ ಮುನ್ನ ಹೊಸ ಪೀಳಿಗೆಯಲ್ಲಿ ದ್ವೇಷ ಹರಡುವ ಹಾಗೂ ಯುವಜನರನ್ನು ಆಯುಧವಾಗಿ ಬಳಸುವವರನ್ನು ಮೊದಲು ಕಂಡುಹಿಡಿಯಬೇಕು. ಎಲ್ಲ ಧರ್ಮಗಳಲ್ಲಿನ ಮೂಲಭೂತವಾದವನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ದೇಶದ ಅಸಹಿಷ್ಣುತೆಗೆ ಕಾರಣ ಕೊಲೆಗಾರರಾಗಿರದೆ, ಧರ್ಮಗಳಲ್ಲಿನ ಕೊಲೆಗಡುಕ ಚಿಂತನೆ ಕಾರಣವಾಗಿದೆ ಎಂದರು.
ಕಲಬುರ್ಗಿ ಅಥವಾ ದಾದ್ರಿ ಘಟನೆ ಕೇವಲ ನೆಪ ಮಾತ್ರವಾಗಿದೆ. ದೇಶದಲ್ಲಿ ನಡೆಯುತ್ತಿರುವ ಒಟ್ಟು ಹಿಂಸೆಗಳ ವಿರುದಟಛಿವಾಗಿ ಪ್ರಶಸ್ತಿ ವಾಪ್ಸಿ ಚಳವಳಿ ನಡೆಯುತ್ತಿದೆ. ಸಾಂಸ್ಕೃತಿಕ ಯುದ್ಧ ಆರಂಭವಾಗಿದ್ದು, ಚಿಂತಕರು ತಮ್ಮ ವಿರೋಧಿಗಳಿಗೆ ಉತ್ತರ ನೀಡುವುದನ್ನು ನಿಲ್ಲಿಸಬೇಕು. ಪ್ರಶಸ್ತಿ ವಾಪಸ್ ಮಾಡದವರೂ ಚಳವಳಿಯ ಹಿಂದಿ ದ್ದಾರೆ ಎನ್ನುವುದನ್ನು ಮರೆಯಬಾರದು ಎಂದರು.
ಸಾಕ್ಷ್ಯಚಿತ್ರ ನಿರ್ಮಾಪಕ ಗೋಪಾಲ್ ಮೆನನ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಬೆಂಬಲಿಗರಿಂದ ಅಹಿಷ್ಣುತೆ ಹೆಚ್ಚಿದೆ. ದೇಶವನ್ನು ಹಿಂದೂ ರಾಷ್ಟ್ರ ಎಂದು ಬಿಂಬಿಸಲು ಹೊರಟಿರುವವರು ಇತರ ಧರ್ಮೀಯರ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದು ಬರಹಗಾರರ ಮೇಲೂ ಹೆಚ್ಚಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖ್ಯಾತ ಲೇಖಕಿ ಶಶಿ ದೇಶಪಾಂಡೆ ಕಾರ್ಯಕ್ರಮದಲ್ಲಿ ಅಸಹಿಷ್ಣುತೆಯನ್ನು ವಿರೋಧಿಸಿ ಪ್ರಶಸ್ತಿ ವಾಪಸ್ ಮಾಡಿದ ಬರಹಗಾರರ ಮಾಹಿತಿಯನ್ನು ಒಳಗೊಂಡ `ಪುರಸ್ಕಾರ ತಿರಸ್ಕಾರ' ಕೃತಿ ಲೋಕಾರ್ಪಣೆಗೊಳಿಸಿದರು. ಲೇಖಕರಾದ ಯೋಗೇಶ್ ಮಾಸ್ಟರ್, ಸತೀಶ್ ಜವರೇಗೌಡ, ಕವಿ ವೀರಣ್ಣ ಮಡಿ ವಾಳರ, ಅರುಣ ಜೋಳದ ಕೂಡ್ಲಗಿ, ಸಂಗಮೇಶ್ ಮೆಣಸಿನಕಾಯಿ, ಮುದ್ದು ತೀರ್ಥಹಳ್ಳಿ, ಹಿರಿಯ ಪತ್ರಕರ್ತ ಜಿ.ಎನ್.ರಂಗ ನಾಥರಾವ್ ಹಾಜರಿದ್ದರು.
Advertisement