ಸರ್ಕಾರದ ಆಡಳಿತ ದುರ್ಬಲಕ್ಕೆ ಷಡ್ಯಂತ್ರ

ಪ್ರತಿಪಕ್ಷ ಬಿಜೆಪಿ ಭ್ರಷ್ಟಾಚಾರದಲ್ಲಿ ರಾಜಿ ಮಾಡಿಕೊಳ್ಳುವುದರ ಜತೆಗೆ ಲೋಕಾಯುಕ್ತ, ರಾಜ್ಯಪಾಲ, ಪ್ರಧಾನಿ ಕಚೇರಿ ಮೂಲಕ ರಾಜ್ಯ ಸರ್ಕಾರದ ಆಡಳಿತವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್‍ನ ವಿ.ಎಸ್. ಉಗ್ರಪ್ಪ...
ವಿ.ಎಸ್. ಉಗ್ರಪ್ಪ
ವಿ.ಎಸ್. ಉಗ್ರಪ್ಪ

ಬೆಂಗಳೂರು: ಪ್ರತಿಪಕ್ಷ ಬಿಜೆಪಿ ಭ್ರಷ್ಟಾಚಾರದಲ್ಲಿ ರಾಜಿ ಮಾಡಿಕೊಳ್ಳುವುದರ ಜತೆಗೆ ಲೋಕಾಯುಕ್ತ, ರಾಜ್ಯಪಾಲ, ಪ್ರಧಾನಿ ಕಚೇರಿ ಮೂಲಕ ರಾಜ್ಯ ಸರ್ಕಾರದ ಆಡಳಿತವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್‍ನ ವಿ.ಎಸ್. ಉಗ್ರಪ್ಪ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಲೋಕಾಯುಕ್ತಹಾಗೂ ರಾಜ್ಯಪಾಲರ ಕಚೇರಿಗಳನ್ನು ದುರ್ಬಳಕೆ ಮಾಡಿಕೊಳ್ಳಲು ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದ ಶಿಫಾರಸುಗಳಾದ ಕೆಪಿಎಸ್‍ಸಿ ಅಧ್ಯಕ್ಷ-ಉಪಾಧ್ಯಕ್ಷ, ಬಿಬಿಎಂಪಿ ವಿಭಜನೆ ಮಸೂದೆ, ಉಪ ಲೋಕಾಯುಕ್ತರ ನೇಮಕ ಸೇರಿದಂತೆ ಬಹುತೇಕ ಶಿಫಾರಸುಗಳಿಗೆ ರಾಜ್ಯಪಾಲರ ಮೂಲಕ ತಡೆ ಹಾಕಿ ನಿಯಂತ್ರಿಸುತ್ತಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದ ಶಿಫಾರಸುಗಳನ್ನು ಸಬೂಬು ಹೇಳುವ ಮೂಲಕ ರಾಜ್ಯಪಾಲರು ತಿರಸ್ಕರಿಸಿದ್ದಾರೆ.

ಕಳಸಾ- ಬಂಡೂರಿ ನೀರಿನ ವಿಚಾರದಲ್ಲಿಯೂ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ನೀರಿನ ಸಮಸ್ಯೆ ಇತ್ಯರ್ಥವಾಗದಂತೆ ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂದು ನೇರ ವಾಗ್ದಾಳಿ ನಡೆಸಿದರು. ಲೋಕಾಯುಕ್ತ ನ್ಯಾ. ಭಾಸ್ಕರರಾವ್ ಮತ್ತು ಉಪ ಲೋಕಾಯುಕ್ತ ನ್ಯಾ. ಸುಭಾಷ್ ಬಿ. ಅಡಿ ಇಬ್ಬರೂ ಸಹ 2013ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಅವಧಿಯಲ್ಲಿಯೇ ನೇಮಕವಾಗಿದ್ದಾರೆ.

ಈ ಇಬ್ಬರ ಮೇಲೆ ಇಂದಿಗೂ ಆಪಾದನೆಗಳಿವೆ. ಅಲ್ಲದೇ 2010ರಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಕುರಿತು ಅಂದಿನ ಲೋಕಾಯುಕ್ತ ಎಸ್ಪಿಯಾಗಿದ್ದ ಮಧುಕರಶೆಟ್ಟಿ ಅವರು ಲೋಕಾಯುಕ್ತಕ್ಕೆ ಬರೆದಿದ್ದ ಪತ್ರಕ್ಕೆ ಇಂದಿಗೂ ತನಿಖೆ ಕೈಗೊಂಡಿಲ್ಲ. ಏಕೆ ತನಿಖೆ ಕೈಗೊಂಡಿಲ್ಲ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು

ಕಾನೂನಿನ ಬಗ್ಗೆ ಗೌರವಿದ್ದರೆ ಅಡಿ ರಾಜಿನಾಮೆ ಕೊಡಲಿ

ಉಪ ಲೋಕಾಯುಕ್ತ ನ್ಯಾ. ಶುಭಾಷ್ ಬಿ. ಅಡಿ ಅವರು ವ್ಯಾಪ್ತಿ ಮೀರಿದ ಕಾರ್ಯ ನಿರ್ವಹಣೆ ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು, ಕಾನೂನಿನ ಸೂಕ್ಷ್ಮತೆ, ಕಾನೂನಿನ ಬಗ್ಗೆ ಗೌರವವಿದ್ದರೆ ಕೂಡಲೇ ರಾಜಿನಾಮೆ ನೀಡಲಿ ಎಂದು ಉಗ್ರಪ್ಪ ಆಗ್ರಹಿಸಿದರು.

ಈ ಮಾತು ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರಿಗೂ ಅನ್ವಯವಾಗುತ್ತದೆ. 2011ರಲ್ಲಿ ಅಂದಿನ ಲೋಕಾಯುಕ್ತ ನ್ಯಾ.ಶಿವರಾಜ್ ಪಾಟೀಲರು ಉಪ ಲೋಕಾಯುಕ್ತರು ಕಾರ್ಯ ನಿರ್ವಹಿಸ-ಬೇಕಾಗಿರುವ ವ್ಯಾಪ್ತಿಯನ್ನು ತಿಳಿಸಿದ್ದಾರೆ.

ಅದರಲ್ಲಿ ಬೆಂಗಳೂರು ನಗರ ಹಾಗೂ ಸ್ವಂತ ಜಿಲ್ಲೆಯಾದ  ಬೆಳಗಾವಿ ನ್ಯಾ. ಅಡಿ ಅವರ ವ್ಯಾಪ್ತಿಗೆ ಬಾರದಿದ್ದರೂ ಹಲವಾರು ಕಡತಗಳನ್ನು ವಿಲೇವಾರಿ ಮಾಡುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಚ್. ರೇವಣ್ಣ, ಶಾಸಕ ಪಿ.ಎಂ. ನರೇಂದ್ರಸ್ವಾಮಿ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com