
ಬೆಂಗಳೂರು: ಸಾರ್ವಜನಿಕರಿಂದ ನಿಶ್ಚಿತ ಠೇವಣಿ ಹಾಗೂ ಚಿಟ್ ಫಂಡ್ ಸ್ಕೀಂಗಾಗಿ ಕೋಟ್ಯಂತರ ರುಪಾಯಿ ಹಣ ಹೂಡಿಕೆ ಮಾಡಿಸಿಕೊಂಡು, ಅದನ್ನು ಹಿಂದಿರುಗಿಸದೆ ತಲೆಮರೆಸಿಕೊಂಡಿದ್ದ ಶ್ರೇಯಸ್ ಚಿಟ್ಸ್ ಮತ್ತು ಶ್ರೇಯಸ್ ಸೌಹಾರ್ದ ಕೋ ಆಪರೇಟಿವ್ ಲಿಮಿಟೆಡ್‍ನ ಮಾಲೀಕನನ್ನು ಜಯ ನಗರ ಪೊಲೀಸರು ಬಂಧಿಸಿದ್ದಾರೆ.
ಬನ್ನೇರುಘಟ್ಟ ರಸ್ತೆ ವಿಜಯಾ ಬ್ಯಾಂಕ್ ಲೇಔಟ್ ನಿವಾಸಿ ಎಂ. ಶ್ರೀನಿವಾಸ್ (63) ಹಾಗೂ ಆತನ ಪತ್ನಿ ಪುಷ್ಪಲತಾ (55) ಬಂಧಿತರು. ಪರಪ್ಪನ ಅಗ್ರಹಾರ ಕೂಡ್ಲು ಗ್ರಾಮ ಹೊಸ ರಸ್ತೆ
ಕಡೆ ಪರಾರಿಯಾಗುತ್ತಿದ್ದ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಭಾನುವಾರ ಸಂಜೆ ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಇಬ್ಬರನ್ನು 10 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ. ಶ್ರೀನಿವಾಸ್, ಪತ್ನಿ ಪುಷ್ಪಲತಾ ಕುಟುಂಬ ಸದಸ್ಯರಾದ ಪ್ರೀತಿ ಹಾಗೂ ಸುದೀಪ್ ಜತೆ ಜಯನಗರ 5ನೇ ಬ್ಲಾಕ್ 9ನೇ ಮುಖ್ಯರಸ್ತೆಯಲ್ಲಿ ಕಳೆದ 25 ವರ್ಷಗಳಿಂದ ಫೈನಾನ್ಸ್ ನಡೆಸುತ್ತಿದ್ದರು.
ಸಾರ್ವಜನಿಕರಿಂದ ರು.1 ಲಕ್ಷದಿಂದ ಕೋಟಿ ರುಪಾಯಿವರೆಗೆ ಠೇವಣಿ ಮತ್ತು ಚಿಟ್ ಸ್ಕೀಂ ಹೆಸರಿನಲ್ಲಿ ಹಣವನ್ನು ಹೂಡಿಕೆ ಮಾಡಿಕೊಂಡು ರಾಷ್ಟ್ರೀಕೃತ ಬ್ಯಾಂಕ್‍ಗಳಿಗಿಂತ ಹೆಚ್ಚು ಬಡ್ಡಿ ಹಣವನ್ನು ಕೊಡುವುದಾಗಿ ನಂಬಿಸುತ್ತಿದ್ದರು. ಇತ್ತೀಚಿನ ಕೆಲ ತಿಂಗಳಿಂದ ಸಾರ್ವಜನಿಕರಿಂದ ಹತ್ತಾರು ಕೋಟಿ ರುಪಾಯಿ ಹೂಡಿಕೆ ಮಾಡಿಸಿಕೊಂಡು ಅಸಲು ಮತ್ತು ಬಡ್ಡಿ ಯಾವುದನ್ನೂ ಸಾರ್ವಜನಿಕರಿಗೆ ಹಿಂದಿರುಗಿಸದೆ ಏಕಾಏಕಿ ತಲೆಮರೆಸಿಕೊಂಡಿದ್ದರು. ಈ ಸಂಬಂಧ ವಂಚನೆಗೊಳಗಾದ ಪ್ರಭಾಕರ್ ಎಂಬುವರು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿಗಳು ಸುಮಾರು 85ಕ್ಕೂ ಹೆಚ್ಚು ಜನರಿಂದ ಕೋಟ್ಯಂತರ ರುಪಾಯಿ ಹೂಡಿಕೆ ಮಾಡಿಸಿಕೊಂಡು ಜನರಿಗೆ ವಂಚಿಸಿ ಪರಾರಿಯಾಗಿದ್ದಾರೆಂದು ಆರೋಪಿಸಿದ್ದರು.
ಪೂರ್ವ ನಿಯೋಜಿತ ಸಂಚು?: ಐಎನ್‍ಜಿ ವೈಶ್ಯ ಬ್ಯಾಂಕ್ ಹಾಗೂ ವಿಜಯಾ ಬ್ಯಾಂಕ್‍ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಆರೋಪಿ ಶ್ರೀನಿವಾಸ್ ಸ್ವಂತ ಫೈನಾನ್ಸ್ ತೆರೆಯಲೆಂದು ಸ್ವಯಂ
ನಿವೃತ್ತಿ ಪಡೆದುಕೊಂಡಿದ್ದರು. 1989ರಲ್ಲಿ ಸಣ್ಣದಾಗಿ ಶ್ರೇಯಸ್ ಫೈನಾನ್ಸ್ ಆರಂಭಿಸಿದ್ದು, ನಂತರ ದೊಡ್ಡದಾಗಿ ಬೆಳೆದು ಕೋಟ್ಯಂತರ ರುಪಾಯಿ ವಹಿವಾಟು ಮಾಡುವ ಫೈನಾನ್ಸ್
ಸಂಸ್ಥೆಯಾಯಿತು.
ಸಾರ್ವಜನಿಕರಿಂದ ನಿಶ್ಚಿತ ಠೇವಣಿ ಹಾಗೂ ಅಧಿಕ ಬಡ್ಡಿ ನೀಡುವುದಾಗಿ ಹಣ ಸಂಗ್ರಹಿಸುತ್ತಿದ್ದ ಶ್ರೀನಿವಾಸ್, ಅದನ್ನು ಕೆಲ ವರ್ಷಗಳ ಹಿಂದೆ ರಿಯಲ್ ಎಸ್ಟೇಟ್‍ನಲ್ಲಿ ಹೂಡಿಕೆ ಮಾಡಿದ್ದರು. ಇದರಿಂದ ಸಾಕಷ್ಟು ಲಾಭ ಮಾಡಿಕೊಂಡು ಸ್ಥಿತಿವಂತರಾಗಿದ್ದರು. ಅಷ್ಟೇ ಅಲ್ಲದೇ ಹಣ ಹೂಡಿದವರಿಗೂ ಬಡ್ಡಿ ಹಾಗೂ ಅಸಲನ್ನು ಹಿಂದಿರುಗಿಸುತ್ತಿದ್ದರು.
ಹೀಗಾಗಿ, ಸಾರ್ವಜನಿಕರಲ್ಲಿ ನಂಬಿಕೆ ಹೆಚ್ಚಾಯಿತು ಎಂಬುದು ದೂರುದಾರ ಪ್ರಭಾಕರ್ ಅವರ ವಿವರಣೆ. ಹಣದ ಹರಿವು ಹೆಚ್ಚಾಗುತ್ತಿದ್ದಂತೆ ಶ್ರೀನಿವಾಸ್, ಕೋಟ್ಯಂತರ ರುಪಾಯಿ ಹಣವನ್ನು ರಿಯಲ್ ಎಸ್ಟೇಟ್ ಸೇರಿದಂತೆ ಬೇರೆ ಉದ್ಯಮಗಳಿಗೆ ಹೂಡಿಕೆ ಮಾಡಿದ್ದಾರೆ. ಇದಕ್ಕಾಗಿ ಅವರು ಸಾರ್ವಜನಿಕರ ಹಣವನ್ನು ಬೇನಾಮಿ ಹೆಸರಿನಲ್ಲಿ ವರ್ಗಾಯಿಸಿದ್ದಾರೆ.
ಇದರಿಂದಾಗಿ ಸಾರ್ವಜನಿಕರಿಗೆ ನೀಡಬೇಕಾಗಿದ್ದ ಹಣವನ್ನು ಸೂಕ್ತ ಸಮಯದಲ್ಲಿ ವಾಪಸು ಮಾಡಲಾಗಲಿಲ್ಲ. ದಿನಕಳೆದಂತೆ ಸಾರ್ವಜನಿಕರಿಗೆ ಹಿಂದಿರುಗಿಸಬೇಕಾದ ಹಣದ ಮೊತ್ತ
ಹೆಚ್ಚಳವಾಗುವ ಜತೆಗೆ ಒತ್ತಡ ಹೆಚ್ಚಾಗಿ ಸಾರ್ವಜನಿಕರು ಫೈನಾನ್ಸ್ ಕಚೇರಿ ಬಳಿ ಸೇರಲು ಆರಂಭಿಸಿದರು. ಇದರಿಂದ, ಶ್ರೀನಿವಾಸ್ ಕುಟುಂಬ ಸಮೇತ ತಲೆಮರೆಸಿಕೊಂಡರು
ಎಂದು ದೂರುದಾರ ಪ್ರಭಾಕರ್ ಹೇಳಿದ್ದಾರೆ.
Advertisement