ವೃತ್ತಿಪರ ಕೋರ್ಸ್‍ಗಳ ಎರಡು ಸೆಮಿಸ್ಟರ್‍ಗಳಿಗೆ ಕನ್ನಡ ಕಡ್ಡಾಯ

ರಾಜ್ಯದಲ್ಲಿ ಮುಂದಿನ ವರ್ಷದಿಂದ ಎಲ್ಲ ವೃತ್ತಿಪರ ಕೋರ್ಸ್‍ಗಳ 2 ಸೆಮಿಸ್ಟರ್‍ಗಳಿಗೆ ಕನ್ನಡ ಕಲಿಕೆ ಕಡ್ಡಾಯಗೊಳಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಹೇಳಿದ್ದಾರೆ...
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ವರ್ಷದಿಂದ ಎಲ್ಲ ವೃತ್ತಿಪರ ಕೋರ್ಸ್‍ಗಳ 2 ಸೆಮಿಸ್ಟರ್‍ಗಳಿಗೆ ಕನ್ನಡ ಕಲಿಕೆ ಕಡ್ಡಾಯಗೊಳಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಕನ್ನಡ-ಸಂಸ್ಕೃತಿ ಯುವಜನೋತ್ಸವ ಆಚರಿಸುವ ಸಂಬಂಧ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಗುರುವಾರ ಈ ವಿಷಯ ತಿಳಿಸಿದರು. ವೃತ್ತಿಪರ ಕೋರ್ಸ್ ಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ವಿಚಾರ ಸಂಬಂಧ ಈಗಾಗಲೇ ಸಾಹಿತಿ ಹೀ. ಚ.ಬೋರಲಿಂಗಯ್ಯ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ಇನ್ನು ಕೆಲವೇ ದಿನಗಳಲ್ಲಿ ತನ್ನ ವರದಿ ನೀಡಲಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಡ ಕಲಿಕೆ ಕಡ್ಡಾಯ ಮಾಡಲಾಗುವುದು. ಇದಕ್ಕೆ ಉನ್ನತ ಶಿಕ್ಷಣ ಇಲಾಖೆಯೂ ಒಪ್ಪಿಗೆ ನೀಡಿದೆ. ಎಲ್ಲ ವೃತ್ತಿಪರ ಕೋರ್ಸ್‍ಗಳಿಗೂ ಎರಡು ಸೆಮೆಸ್ಟರ್ ಕನ್ನಡ ಕಲಿಸಲಾಗುತ್ತದೆ ಎಂದರು.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತ ನಂತರ ಅದರ ಕಾರ್ಯ ಕಲಾಪಗಳ ನಿರ್ವಹಣೆಗೆ ಯೋಜನಾ ನಿರ್ದೇಶಕರ ನೇಮಕ ಇನ್ನೂ ಸಾಧ್ಯವಾಗಿಲ್ಲ. ಕಾನೂನು ತೊಡಕಿನ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಅಕ್ಟೋಬರ್ 12ರಂದು ಕೇಂದ್ರದ ಪ್ಲಾನಿಂಗ್ ಕಮ್ ಮಾನಿಟರಿಂಗ್ ಬೋರ್ಡ್ ಸಭೆ ನಡೆಯಲಿದ್ದು, ಕನ್ನಡದ ಶಾಸ್ತ್ರೀಯ ಭಾಷೆಗೆ ತಮಿಳಿನ ರೀತಿ ಹೆಸರನ್ನು ಇಡುವ ಬಗ್ಗೆಯೂ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು. ಅಪಾರ್ಟ್ ಮೆಂಟ್ ನಲ್ಲಿ ನೆಲೆಸಿರುವ ಅನ್ಯ ಬಾಷಿಕರಿಗೆ ಕನ್ನಡ ಕಲಿಕೆ ಮಾಡುವುದಕ್ಕೆ ಪ್ರಾಧಿಕಾರ ಈಗಾಗಲೇ ಕ್ರಮ ತೆಗೆದುಕೊಂಡಿದೆ. ಬೆಂಗಳೂರಿನಲ್ಲಿರುವ ಸುಮಾರು 799 ಅಪಾರ್ಟ್ ಮೆಂಟ್ ಕಲ್ಯಾಣ ಸಂಘಗಳಿಗೆ ಈಗಾಗಲೇ ಪತ್ರ ಬರೆಯಲಾಗಿದ್ದು, 50 ಲಸಂಘದವರು ಕಲಿಕೆ ನೀಡುವಂತೆ ಪತ್ರ ಬರೆದಿದ್ದಾರೆ. ಅದರ ಜತೆಗೆ ಆನ್ ಲೈನ್ ಕನ್ನಡ ಕಲಿಕೆ ಯೋಜನೆಗೆ ನಾವು ಕ್ರಮ ಕೈಗೊಂಡಿದ್ದು, ಮೊಬೈಲ್ ಆ್ಯಪ್ ಹಾಗೂ ಇಂಟರ್ನೆಟ್ ಮೂಲಕವೂ ಕಲಿಸುತ್ತೇವೆ ಎಂದರು.

ಕನ್ನಡ ಸಂಸ್ಕೃತಿ ಯುವಜನೋತ್ಸವ: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಕನ್ನಡ ಸಂಸ್ಕೃತಿ ಯುವಜನೋತ್ಸವ ಆಚರಿಸಲು ಪ್ರಾಧಿಕಾರ ನಿರ್ಧರಿಸಿದ್ದು, ಈ ಸಂಬಂಧ ಎಲ್ಲ ವಿವಿ ಪ್ರತಿನಿಧಿಗಳ ಜತೆಗೆ ಚರ್ಚೆ ನಡೆಸಿದ್ದೇನೆ. ಕನ್ನಡ ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶ. ಇದರ ಅರ್ಧ ಖರ್ಚನ್ನು ಪ್ರಾಧಿಕಾರದ ವತಿಯಿಂದ ಭರಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com