ಕರ ಕಟ್ಟದೆ ರಾಜ್ಯ ಪ್ರವೇಶ ಕೇರಳ ಬಸ್ ಆರ್‍ಟಿಒ ವಶ

ಮೈಸೂರಿನ ಆರ್ ಟಿಒ ಅಧಿಕಾರಿಯ ಸಹಿ ಮಾಡಿರುವ ಹಾಗೆ ನಕಲಿ ತೆರಿಗೆ ಪಾವತಿ ರಸೀದಿಗಳನ್ನು ಸಿದ್ಧಪಡಿಸಿದ್ದ ಕೇರಳ ಮೂಲದ ವೋಲ್ವೋ ಬಸ್ ವೊಂದನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್ ಟಿಒ) ಗುರುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಮೈಸೂರಿನ ಆರ್ ಟಿಒ ಅಧಿಕಾರಿಯ ಸಹಿ ಮಾಡಿರುವ ಹಾಗೆ ನಕಲಿ ತೆರಿಗೆ ಪಾವತಿ ರಸೀದಿಗಳನ್ನು ಸಿದ್ಧಪಡಿಸಿದ್ದ ಕೇರಳ ಮೂಲದ ವೋಲ್ವೋ ಬಸ್ ವೊಂದನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್ ಟಿಒ) ಗುರುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸಾರಿಗೆ ಆಯುಕ್ತ ರಾಮೇಗೌಡ, ಕೇರಳದಿಂದ ರಾಜ್ಯ ಕೈ ಪ್ರವೇಶ ಮಾಡುವಾಗ ಗುಂಡ್ಲುಪೇಟೆ ಚೆಕ್ ಪೋಸ್ಟ್ ನಲ್ಲಿ ರಸ್ತೆ ತೆರಿಗೆ ಪಾವತಿಸಬೇಕು. ತೆರಿಗೆ ಪಾವತಿ ತಪ್ಪಿಸುವ ಉದ್ದೇಶದಿಂದ ಮತ್ತೊಂದು ಮಾರ್ಗದಿಂದ ಮೈಸೂರು ತಲುಪುತ್ತಾರೆ. ನಂತರ ಮೈಸೂರಿನ ಆರ್ ಟಿಒ ಹಿರಿಯ ನಿರೀಕ್ಷಕ ರೂಪಂ ಚಕ್ರವರ್ತಿ ಎಂಬ ಅಧಿಕಾರಿಯ ಹೆಸರಿನಲ್ಲಿ ಸಹಿ ಮಾಡಲಾಗಿದೆ. ಆದರೆ ರಾಜ್ಯದಲ್ಲಿ ಆ ಹೆಸರಿನ ಅಧಿಕಾರಿಯೇ ಇಲ್ಲ ಎಂದು ಹೇಳಿದರು.

ಗುರುವಾರ ರಾತ್ರಿ ಬೆಂಗಳೂರಿನ ಸಿಲ್ಕ್ ಬೋರ್ಡ್ ನಲ್ಲಿ ಆರ್ ಟಿಒ ಹಿರಿಯ ನಿರೀಕ್ಷಕ ಜೆ.ಪಿ. ಕೃಷ್ಣಾನಂದ ಹಾಗೂ ಹೆಚ್ಚುವರಿ ಆಯುಕ್ತರಾದ ಗಾಯತ್ರಿದೇವಿ ಅವರು ಪರಿಶೀಲಿಸದ ಸಂದರ್ಭದಲ್ಲಿ ರಸೀದಿಯ ಪೇಪರ್ ಗುಣಮಟ್ಟದಲ್ಲಿನ ವ್ಯತ್ಯಾಸದಿಂದ ನಕಲಿ ಎಂದು ಪತ್ತೆ ಹಚ್ಚಲಾಗಿದೆ. ಕೇರಳದ ವೈಷ್ಣವಿ ಟ್ರಾವೆಲ್ಸ್ ನ ಕೆಎಲ್-13, ಎಎ6750 ನಂಬರಿನ ಬಸ್ಸನ್ನು ವಶಕ್ಕೆ ಪಡೆದಿದ್ದು, ಮೈಕೋ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಬಸ್ಸಿನ ಚಾಲಕ ಹಾಗೂ ಕ್ಲೀನರ್ ಇಬ್ಬರನ್ನೂ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದರು.

ಬಸ್ಸಿನ ಲಗೇಜ್ ಕಂಪಾರ್ಟ್ ಮೆಂಟ್ ನಲ್ಲಿದ್ದ 6 ನಕಲಿ ಖಾಲಿ ರಸೀದಿಗಳು, ನಂಬರ್ ಮಿಷನ್, ಎರಡು ಕಲರ್ ಇಂಕ್ ಪ್ಯಾಡ್ ಮತ್ತು ಪೇಪರ್ ಕಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಸ್ ಕೇರಳದ ನೆಡುಮಂಗಾಡುವಿನ ಸಾಜಿರ್ ಎಂಬುವವರಿಗೆ ಸೇರಿದ್ದಾಗಿದೆ. ಆದರೆ ಅಜಿತ್ ಎಂಬ ಏಜೆಂಟ್ ಗೆ ಬಸ್ ಲೀಜ್ ಗೆ ನೀಡಿದ್ದು, ಆ ವ್ಯಕ್ತಿ ನಡೆಸುತ್ತಿರಬಹುದು ಎಂದು ಶಂಕಿಸಲಾಗಿದೆ. ತನಿಖೆಯಿಂದ ಮಾತ್ರ ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com