ಭಾರಿ ಮಳೆ, ಸಿಡಿಲಿಗೆ 5 ಬಲಿ

ಉತ್ತರ ಕರ್ನಾಟಕದಲ್ಲಿ ಭಾನುವಾರ ಸಂಜೆ ಭಾರಿ ಮಳೆಯಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಸಿಡಿಲಿಗೆ ಐವರು ಬಲಿಯಾಗಿದ್ದಾರೆ. ಜೇವರ್ಗಿ...ತಾಲೂಕು
ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯ ನಡುವೆಯೇ ಜನರು ಓಡಾಡುತ್ತಿರುವ ದೃಶ್ಯ
ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯ ನಡುವೆಯೇ ಜನರು ಓಡಾಡುತ್ತಿರುವ ದೃಶ್ಯ
Updated on

ಕಲಬುರಗಿ: ಉತ್ತರ ಕರ್ನಾಟಕದಲ್ಲಿ ಭಾನುವಾರ ಸಂಜೆ ಭಾರಿ ಮಳೆಯಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಸಿಡಿಲಿಗೆ ಐವರು ಬಲಿಯಾಗಿದ್ದಾರೆ. ಜೇವರ್ಗಿ ತಾಲೂಕು ಕಂದಗೋಳ ಗ್ರಾಮದ ರೈತ ಶರಣಗೌಡ ಪೊಲೀಸ್ ಪಾಟೀಲ್ (58), ಅಫಜಲ್ಪುರ ತಾಲೂಕಿನ ಹಳ್ಯಾಳದಲ್ಲಿ ಬಸವರಾಜ ಆತನೂರ (25) ಹಾಗೂ ರಾಗಿಣಿ ಆತನೂರ (16), ಚಿತ್ತಾಪುರ ತಾಲೂಕು ಹೊನಗುಂಟಿ ಗ್ರಾಮದ ಚಂದ್ರಮ್ಮ (53), ಸಕ್ಕುಬಾಯಿ (30) ಅಸುನೀಗಿದ್ದಾರೆ.

ನವಲಗುಂದ ತಾಲೂಕಿನ ತುಪರಿ ಹಳ್ಳದ ಪ್ರವಾಹಕ್ಕೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಹಾಗೂ ಒಂದು ಎತ್ತು ಸಿಲುಕಿದ ಘಟನೆ ನಡೆದಿದೆ. ಮೊರಬ ಗ್ರಾಮದ ರೈತ ಫಕ್ಕೀರಪ್ಪ ಬಸಪ್ಪ ಡೊಳ್ಳಿನ (60) ಹಾಗೂ ಜೊತೆಗಿದ್ದ ಒಂದು ಎತ್ತು ಕೊಚ್ಚಿ ಹೋಗಿದ್ದು, ಮತ್ತೊಂದು ಎತ್ತು ಈಜಿ ದಡ ಸೇರಿದೆ. ಉತ್ತರ ಕನ್ನಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಗದಗ, ಕೊಪ್ಪಳ, ಬಳ್ಳಾರಿ, ಧಾರವಾಡ, ಬೆಳಗಾವಿ, ವಿಜಯಪುರದಲ್ಲೂ ಮಳೆಯಾಗಿದೆ.

ರಾಜಧಾನಿ ತತ್ತರ:
ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ನಗರದ ನಾಲ್ಕೈದು ಕಡೆ ಮರಗಳು ಉರುಳಿ ಬಿದ್ದಿದ್ದು ಹಲವೆಡೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಬೇಕಾಯಿತು.ನಗರದ ಹಲವು ರಸ್ತೆಗಳು ಜಲಾವೃತ ಗೊಂಡಿದ್ದು, ಸಂಚಾರ ಅಸ್ತವ್ಯಸ್ತವಾಯಿತು.ಸಂಜೆ ಸುರಿದ ಮಳೆಯಿಂದ ಶಾಪಿಂಗ್ ಹೋಗುವವರಿಗೆ ನಿರಾಶೆ ಉಂಟಾಯಿತು.ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾಕಷ್ಟು ಸಮಸ್ಯೆ ತಂದೊಡ್ಡಿದ್ದರೆ, ಪಾರ್ಕಿಂಗ್ ಮಾಡಲಾಗಿದ್ದ ವಾಹನಗಳು ಮಳೆ ನೀರಿನಲ್ಲಿ  ಸಿಲುಕಿಕೊಂಡಿದ್ದವು. ಇನ್ನು ಕೆಲವು ರಸ್ತೆಗಳಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ಸಂಚಾರ ನಿಧಾನವಾಗಿತ್ತು.

ಉರುಳಿದ ಮರ: ಬನಶಂಕರಿ, ಹೆಗ್ಡೆ ನಗರ,ಯಲಹಂಕ, ಥಣಿಸಂದ್ರ ಪ್ರದೇಶದಲ್ಲಿ ಮರಗಳು ಉರುಳಿ ಬಿದ್ದಿವೆ. ಸಾರ್ವಜನಿಕರು ಕರೆ ಮಾಡಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಮರಗಳನ್ನು ತೆರೆವುಗೊಳಿಸಲಾಯತು ಎಂದು ಬಿಬಿಎಂಪಿ ನಿಯಂತ್ರಣ ಕೊಠಡಿ ಸಿಬ್ಬಂದಿ ಮಾಹಿತಿ ನೀಡಿದರು.ಇದೇ ವೇಳೆ ಹೆಗ್ಡೆ ನಗರ ಸಮೀಪ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದ ಕಾರಣ ಸಂಚಾರ ದಟ್ಟಣೆ ಉಂಟಾಗಿತ್ತು. ಶ್ರೀನಿವಾಗಿಲು-ದೊಮ್ಮಲೂರು ಮೇಲ್ಸೇತುವೆ ಬಳಿ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದ ಕಾರಣ ಸಂಚಾರ ದಟ್ಟಣೆ ಉಂಟಾಗಿತ್ತು. ಉಳಿದಂತೆ ಬನ್ನೇರುಘಟ್ಟ ರಸ್ತೆ, ಬಿಳೇಕಹಳ್ಳಿ, ಹಳೇ ಏರ್ ಪೋರ್ಟ್ ರಸ್ತೆ, ಕಾಡುಬೀಸನಹಳ್ಳಿ, ಸಾಗರ್ ಆಸ್ಪತ್ರೆ, ಕುಂದಲಹಳ್ಳಿ, ವರ್ತೂರು, ಕಾಡುಗೋಡಿ,ಕೋರಮಂಗಲದ ರಸ್ತೆಗಳಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ನಿಂತಿತ್ತು.

ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು.ಕೆಲವು ಪ್ರದೇಶಗಳಲ್ಲಂತೂ ಒಳಚರಂಡಿಗಳಲ್ಲಿ ನೀರು ತುಂಬಿ ಹರಿಯುತಿತ್ತು. ಇದರಿಂದ ಮ್ಯಾನ್ ಹೋಲ್‍ಗಳು ಬಾಯಿ ತೆರೆದುಕೊಂಡು ಕೊಳಚೆ ನೀರು ರಸ್ತೆಗೆ ಬಂದಿದ್ದವು. ಇದು ಕೂಡ ಟ್ರಾಫಿಕ್ ಜಾಮ್ ಗೆ ಕಾರಣವಾಯಿತು.

ನಾಗವಾರ ಹಾಗೂ ಹಲಸೂರು ಕೆರೆ ಪ್ರದೇಶದಲ್ಲಿ ಗಣೇಶ ವಿಸರ್ಜನೆಗೆ ಮಳೆ ಅಡ್ಡಿಪಡಿಸಿತು. ಉಳಿದಂತೆ ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಜಯನಗರ, ಎಂ.ಜಿ. ರಸ್ತೆ,ರಾಜಾಜಿನಗರ, ಮಡಿವಾಳ, ಶೇಷಾದ್ರಿಪುರ,ಕನಕಪುರ ರಸ್ತೆ, ಹಳೇ ಮದ್ರಾಸ್ ರಸ್ತೆ, ಮೈಸೂರು ರಸ್ತೆ, ಹೊಸೂರು ರಸ್ತೆ, ತುಮಕೂರು ರಸ್ತೆ,ಮಾಗಡಿ ರಸ್ತೆ, ಬನ್ನೇರುಘಟ್ಟ ರಸ್ತೆ, ಬಳ್ಳಾರಿ ರಸ್ತೆಗಳಲ್ಲಿ ತಗ್ಗು ಪ್ರದೇಶದಲ್ಲಿ ನೀರು ನಿಂತಿದ್ದ ಕಾರಣ ವಾಹನ ಸಂಚಾರ ನಿಧಾನಗತಿಯಲ್ಲಿತ್ತು ಎಂದು ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿ ಸಿಬ್ಬಂದಿ ಮಾಹಿತಿ ನೀಡಿದರು.

ಇನ್ನೆರಡು ದಿನ ಮಳೆ
ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಬಿಟ್ಟುಬಿಟ್ಟು ಮಳೆ ಬರುತ್ತಿದ್ದು, ಈ ಪರಿಸ್ಥಿತಿ ಇನ್ನೂ ಎರಡು ದಿನ ಮುಂದುವರಿಯುವ ಸಾಧ್ಯತೆಗಳಿವೆ.ಸಂಜೆ ವೇಳೆ ಮಳೆ ಬೀಳುವ ಸಾಧ್ಯತೆಗಳು ಹೆಚ್ಚಿದ್ದು, ಪ್ರದೇಶದಿಂದ ಪ್ರದೇಶಕ್ಕೆ ಮಳೆ ಪ್ರಮಾಣ ಮತ್ತು ಸಮಯ ವ್ಯತ್ಯಾಸವಾಗಬಹುದು. ಹಗಲಿನ ತೀವ್ರ ಸೆಕೆ ಪರಿಸ್ಥಿತಿಯೂ ಮುಂದುವರಿಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com