ಬಳ್ಳಾರಿ: ಗಣಿ ಉದ್ಯಮಿ ಟಪಾಲ್ ಗಣೇಶ್ ಮನೆಯಲ್ಲಿ ಶುಕ್ರವಾರ ಶೂಟೌಟ್ ನಡೆದಿದ್ದು, ಮೂವರು ಗಾಯಗೊಂಡಿದ್ದಾರೆ. ಇಲ್ಲಿನ ರಾಘವೇಂದ್ರ ಕಾಲನಿಯಲ್ಲಿರುವ ನಿವಾಸದಲ್ಲಿ ಪಕ್ಷಮಾಸದ ಆಚರಣೆ ವೇಳೆ ಕ್ಷುಲ್ಲಕ ಕಾರಣಕ್ಕೆ ನಡೆದ ಮಾತಿನ ಚಕಮಕಿಯಲ್ಲಿ ಫೈರಿಂಗ್ ನಡೆದಿದೆ.
ಟಪಾಲ್ ಅಶ್ವಿನ್ ಫೈರಿಂಗ್ ನಡೆಸಿದ ಆರೋಪಿ. ಘಟನೆಯಲ್ಲಿ ಮನೋಜ್, ರಂಜಿತ್ ಹಾಗೂ ವಿನೋದ್ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳು ಇಲ್ಲಿನ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಣಿ ಉದ್ಯಮಿ ಟಪಾಲ್ ಗಣೇಶ್ ಕುಟುಂಬ ಪಕ್ಷಮಾಸ ಆಚರಣೆ ಏರ್ಪಡಿಸಿತ್ತು. ಪೂಜೆ ಬಳಿಕ ಊಟಕ್ಕೆ ಕುಳಿತಿದ್ದಾಗ ತನ್ನ ತಾಯಿ ಬಗ್ಗೆ ಆಡಿದ ಮಾತುಗಳಿಂದ ಸಿಟ್ಟಿಗೆದ್ದ ಟಪಾಲ್ ಅಶ್ವಿನ್ ಹಾಗೂ ವಿನೋದ್ ಅವರು ರಂಜಿತ್ ಮತ್ತು ಮನೋಜ್ ಎಂಬುವರ ಜತೆಗೆ ಜಗಳವಾಡಿದ್ದಾರೆ.
ಈ ವೇಳೆ ಟಪಾಲ್ ಅಶ್ವಿನ್ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಮನೋಜ್ ತೊಡೆಗೆ, ವಿನೋದ್ ಹೊಟ್ಟೆ ಎಡಭಾಗಕ್ಕೆ ಗುಂಡು ಹೊಕ್ಕಿದ್ದು, ಅಪಾಯದಿಂದ ಪಾರಾಗಿದ್ದಾರೆ. ಮನೋಜ್ ತೊಡೆಯಿಂದ ಗುಂಡು ಹೊರತೆಗೆಯಲಾ ಗಿದ್ದು, ರಂಜಿತ್ ಕೈಗೆ ಗುಂಡಿನೇಟು ಬಿದ್ದಿದೆ.
ಅಶ್ವಿನ್ ಕೈಯಲ್ಲಿದ್ದ ರಿವಾಲ್ದಾರ್ ಕಸಿದುಕೊಳ್ಳಲು ಯತ್ನಿಸುವಾಗ ಆತನ ಕೈಗೂ ಪೆಟ್ಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ವೇಳೆ ಟಪಾಲ್ ಗಣೇಶ್ ಮನೆಯಲ್ಲಿರಲಿಲ್ಲ.