ಕಾಲಿನ ಮೇಲೆ ಯಲ್ಲಮ್ಮ ದೇವಿ ಟ್ಯಾಟೂ: ಅಸ್ಟ್ರೇಲಿಯಾ ಪ್ರಜೆ ಕ್ಷಮಾಪಣೆ
ಬೆಂಗಳೂರು: ಅಸ್ಟ್ರೇಲಿಯಾ ಪ್ರಜೆ ಕಾಲಿನ ಮೇಲೆ ಹಿಂದೂ ದೇವತೆ ಟ್ಯಾಟೂ ಹಾಕಿಸಿಕೊಂಡಿದ್ದಕ್ಕೆಕಿರುಕುಳ ನೀಡಿ, ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭಯಗೊಂಡ ಆತ ಕ್ಷಮಾಪಣೆ ಕೇಳಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮ್ಯಾಥ್ಯೂ ಗೋರ್ಡನ್ ಎಂಬ ಆಸ್ಟ್ರೇಲಿಯನ್ ತನ್ನ ಪ್ರಿಯತಮೆ ಜೊತೆ ನಗರದ ರೆಸಿಡೆನ್ಸಿ ರಸ್ತೆಯ ಹೊಟಲ್ ವೊಂದಕ್ಕೆ ಬಂದಿದ್ದರು. ಇವರು ಕಾಲಿನ ಮೇಲಿನ ಮೀನ ಖಂಡದ ಮೇಲೆ ಯಲ್ಲಮ್ಮ ದೇವಿಯ ಟ್ಯಾಟೂ ಹಾಕಿಸಿಕೊಂಡಿದ್ದರು. ಇದನ್ನು ಗಮನಿಸಿದ ಶಾಂತಿನಗರದ ಬಿಜೆಪಿಯ ನಾಯಕ ರಮೇಶ್ ಯಾದವ್ ಮತ್ತು ಅವರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮ್ಯಾಥ್ಯೂ ಅವರ ಜತೆ ವಾಗ್ವಾದಕ್ಕಿಳಿದರು. ಜೊತೆಗೆ ರಮೇಶ್ ಯಾದವ್ ಬೆಂಬಲಿಗರು ಕಾಲಿನ ಚರ್ಮವನ್ನು ಕೀಳುವುದಾಗಿ ಬೆದರಿಕೆ ಹಾಕಿದ್ದರಿಂದ ಮ್ಯಾಥ್ಯೂ ಆತಂಕಕ್ಕೀಡಾಗಿದ್ದರು.
ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದ ಪೊಲೀಸರು ಕೂಡ ಈ ರೀತಿ ಕಾಲಿನ ಮೇಲೆ ಯಲ್ಲಮ್ಮನ ಹಚ್ಚೆ ಹಾಕಿಸುವುದು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆಂದು ತಿಳಿಹೇಳಿದ ಮೇಲೆ ಮ್ಯಾಥ್ಯೂ ಕ್ಷಮಾಪಣೆ ಪತ್ರವನ್ನು ಬರೆದುಕೊಟ್ಟಿದ್ದಾರೆ. ನನಗೆ ಈ ಚಿತ್ರದ ಮಹತ್ವ ಗೊತ್ತಿರಲಿಲ್ಲ. ನಾನು ಹಿಂದು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದೇನೆ. ಧಕ್ಕೆ ತಂದಿರುವುದಕ್ಕೆ ತೀವ್ರ ವಿಷಾದಿಸುತ್ತೇನೆ, ಇನ್ನು ಮುಂದೆ ಆ ರೀತಿ ಟ್ಯಾಟೂ ಹಾಕಿಸಿಕೊಳ್ಳುವುದಿಲ್ಲ ಎಂದು ಪತ್ರದಲ್ಲಿ ಮ್ಯಾಥ್ಯೂ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ