ಗ್ರಾಹಕರ ಸೋಗಲ್ಲಿ ಬಂದು ಆಭರಣ ದೋಚಿದ ಕಳ್ಳರು

ವಿಜಯನಗರದಲ್ಲಿರುವ ಆಭರಣ ಮಳಿಗೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು ಸಿಬ್ಬಂದಿಗೆ ಬೆದರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ವಜ್ರಗಳನ್ನು ದೋಚಿರುವ ಘಟನೆ ನಡೆದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ವಿಜಯನಗರದಲ್ಲಿರುವ ಆಭರಣ ಮಳಿಗೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು ಸಿಬ್ಬಂದಿಗೆ ಬೆದರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ವಜ್ರಗಳನ್ನು ದೋಚಿರುವ ಘಟನೆ ನಡೆದಿದೆ.

ಇಲ್ಲಿನ ಟಿಟಿಎಂಸಿ ಬಸ್ ನಿಲ್ದಾಣದ ಸರ್ವಿಸ್ ರಸ್ತೆಯಲ್ಲಿರುವ ಮೈ ಕಲ್ಯಾಣ ಆಭರಣ ಮಳಿಗೆಯಲ್ಲಿ ಶುಕ್ರವಾರ ಸಂಜೆ 7.30ರಲ್ಲಿ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಗ್ರಾಹಕನ ಸೋಗಿನಲ್ಲಿ ಸಂಜೆ ಮಳಿಗೆಯೊಳಗೆಗೆ ಬಂದಿದ್ದಾನೆ. ಚಿನ್ನದ ಸರ ತೋರಿಸುವಂತೆ ಕೇಳಿದ್ದಾನೆ. ಮಳಿಗೆಯಲ್ಲಿದ್ದ ಸಿಬ್ಬಂದಿ ವೇಣುಗೋಪಾಲ್ ಎಂಬುವರು ಆಭರಣಗಳನ್ನು ತೋರಿಸುತ್ತಿದ್ದರು. ಅದೇ ವೇಳೆ ಮತ್ತಿಬ್ಬರು ಒಳಗೆ ಪ್ರವೇಶಿಸಿದಾಗ ಓರ್ವ ವೇಣುಗೋಪಾಲ್‍ಗೆ ಚಾಕು ತೋರಿಸಿದ್ದಾನೆ. ಮತ್ತೊಬ್ಬ ಮಳಿಗೆ ಶೆಟರ್ ಎಳೆದಿದ್ದಾನೆ. ಕೂಗಾಡಿದರೆ ಚಾಕುವಿನಿಂದ ಇರಿದು ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಬಳಿಕ ಆತನ ಕೈ ಕಾಲು ಕಟ್ಟಿಹಾಕಿ ಮಳಿಗೆಯಲ್ಲಿದ್ದ ಕೊಠಡಿಯೊಳಗೆ ಕೂಡಿ ಹಾಕಿದ್ದಾರೆ.

ಚೀಲಕ್ಕೆ ತುಂಬಿಕೊಂಡು ಹೋದರು ಚಿನ್ನಾಭರಣ ಹಾಗೂ ವಜ್ರಗಳನ್ನು ಚೀಲಕ್ಕೆ ತುಂಬಿಕೊಂಡ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅಲ್ಲದೆ, ಕ್ಯಾಮರಾದ ಕಂಪ್ಯೂಟರ್‍ನ್ನು ಬ್ಯಾಗ್ ನಲ್ಲೇ ಹಾಕಿಕೊಂಡು ಹೋಗಿದ್ದಾರೆ. ಕೆಲ ಹೊತ್ತಿನ ಬಳಿಕ ಕಟ್ಟಿದ ಹಗ್ಗ ಬಿಡಿಸಿಕೊಂಡ ವೇಣುಗೋಪಾಲ್ ವ್ಯವಸ್ಥಾಪಕ ಶಿವರಾಮ್ ಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಮಳಿಗೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದ ಡಿವಿಆರ್ ಇಲ್ಲದಿರುವುದು ಗೊತ್ತಾಗಿದೆ. ಹೀಗಾಗಿ,
ಆರೋಪಿಗಳ ಚಹರೆ ಗುರುತು ಹಿಡಿಯಲು ಸಾಧ್ಯವಾಗಿಲ್ಲ. ``ಸಾಮಾನ್ಯವಾಗಿ ಮಳಿಗೆಯಲ್ಲಿ ಇಬ್ಬರು ಇರುತ್ತಿದ್ದೆವು. ಆದರೆ, ರಜೆಯಲ್ಲಿದ್ದ ಕಾರಣ ವೇಣುಗೋಪಾಲ್ ಮಾತ್ರ ಮಳಿಗೆಯಲ್ಲಿದ್ದ,'' ಎಂದು ವ್ಯವಸ್ಥಾಪಕ ಶಿವರಾಮ್ ಹೇಳಿದ್ದಾರೆ.

ಚಿನ್ನಾಭರಣ ದೋಚಿದ ದುಷ್ಕರ್ಮಿಗಳು ಕನ್ನಡದಲ್ಲಿ ಮಾತನಾಡುತ್ತಿದ್ದರು. ಈ ಪೈಕಿ ಓರ್ವ ಅರ್ಧ ಹೆಲ್ಮೆಟ್ ಧರಿಸಿದ್ದ ಎಂದು ವೇಣುಗೋಪಾಲ್ ಪೊಲೀಸರಿಗೆ ತಿಳಿಸಿದ್ದಾನೆ. ಹೀಗಾಗಿ, ಆರೋಪಿಗಳು ಬೈಕ್‍ನಲ್ಲಿ ಬಂದಿರಬಹುದು ಎನ್ನುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿರುವ ಬೇರೆ ಮಳಿಗೆಗಳ ಸಿಸಿ ಕ್ಯಾಮರಾಗಳ ಡಿವಿಆರ್ ಪರಿಶೀಲನೆ ನಡೆಸಲಾಗುತ್ತದೆ. ಮಳಿಗೆಯಲ್ಲಿ ಒಬ್ಬನೇ ಇರುವುದನ್ನು ತಿಳಿದಿದ್ದ ದುಷ್ಕ-ರ್ಮಿಗಳೇ ಸಂಚು ರೂಪಿಸಿ ಕೃತ್ಯ ಎಸಗಿರಬಹುದು ಎಂದು ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com