ಮುಗಿಯಿತು ರಜೆ, ಟ್ರಾಫಿಕ್ ನಲ್ಲಿ ಸಜೆ

ಭಾನುವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗಿನ ಸಮಯದಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಸಂಚರಿಸಲು ತೆಗೆದುಕೊಂಡಿದ್ದು ಬರೋಬ್ಬರಿ 6 -7 ತಾಸು!
ವಾಹನ ದಟ್ಟಣೆ(ಸಾಂದರ್ಭಿಕ ಚಿತ್ರ)
ವಾಹನ ದಟ್ಟಣೆ(ಸಾಂದರ್ಭಿಕ ಚಿತ್ರ)

ಬೆಂಗಳೂರು: ಭಾನುವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗಿನ ಸಮಯದಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಸಂಚರಿಸಲು ತೆಗೆದುಕೊಂಡಿದ್ದು ಬರೋಬ್ಬರಿ 6 -7 ತಾಸು!
ವಿಜಯದಶಮಿ, ದಸರಾ, ಮೊಹರಮ್ ಹಬ್ಬ ಹೀಗೆ ಗುರುವಾರದಿಂದಲೇ ಸಾಲು ಸಾಲು ಹಬ್ಬದ ಸರಣಿ ರಜೆ ಹಿನ್ನೆಲೆಯಲ್ಲಿ ನಗರದಿಂದ ಹೊರಹೋಗಿದ್ದವರೆಲ್ಲಾ ಭಾನುವಾರ ಸಂಜೆಯಿಂದಲೇ ಹಿಂದಿರುಗತೊಡಗಿದ್ದಾರೆ. ಹೀಗಾಗಿ ಮೈಸೂರು- ಬೆಂಗಳೂರು, ತುಮಕೂರು-ಬೆಂಗಳೂರು, ಹೊಸೂರು- ಬೆಂಗಳೂರು ಮುಂತಾದ ಪ್ರಮುಖ ರಸ್ತೆಗಳು ಗಿಜಿಗುಡುತ್ತಿದ್ದವು.
ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ರಸ್ತೆ(1 ಬದಿ)ಯಲ್ಲಿ ವಾಹನ ಸಂಚಾರ ಸಾಮಾನ್ಯದ ರೀತಿಯಲ್ಲಿದ್ದರೂ ಆ ಕಡೆಯಿಂದ ಬೆಂಗಳೂರಿಗೆ ಬರುವ ರಸ್ತೆ ಭಾನುವಾರ ತೀವ್ರ ವಾಹನ ದಟ್ಟಣೆ ಕಂಡಿತು. ಅದರ ಪ್ರಭಾವ ಕೆಂಗೇರಿ, ಮೈಸೂರು ರಸ್ತೆ, ಮೆಜಸ್ಟಿಕ್ ಸುತ್ತಮುತ್ತ, ಮೈಸೂರು ಬ್ಯಾಂಕ್ ವೃತ್ತ, ತುಮಕೂರು ರಸ್ತೆ, ಕೆ.ಆರ್ ಪುರ ಮುಂತಾದ ಕಡೆ ತೀವ್ರವಾಗಿತ್ತು. ನಗರದ ಬಹುತೇಕ ರಸ್ತೆಗಳಲ್ಲಿ ಭಾನುವಾರ ರಾತ್ರಿಯಿಂದಲೇ ಸಂಚಾರ ದಟ್ಟಣೆ ಬಿಸಿ ಕಾಣಿಸಿಕೊಂಡಿದೆ.
ಪ್ರತಿನಿತ್ಯ ಸಂಚರಿಸುವ 8 ಸಾವಿರ ಕೆ.ಎಸ್.ಆರ್.ಟಿ.ಸಿ ಬಸ್ ಗಳ ಜತೆಗೆ ಹೆಚ್ಚುವರಿ 1 ,500 ಹೆಚ್ಚುವರಿ ಬಸ್ ನಿಯೋಜಿಸಲಾಗಿತ್ತು. ಇವೆಲ್ಲಾ ಐದಾರು ಗಂಟೆಗಳ ಅಂತರದಲ್ಲಿ ಒಟ್ಟಿಗೇ ಬೆಂಗಳೂರಿಗೆ ಹಿಂದಿರುಗಲಿವೆ. ಜೊತೆಗೆ ಸಾವಿರಾರು ಖಾಸಗಿ ವಾಹನಗಳು ಬೆಂಗಳೂರಿನತ್ತ ಮುಖಮಾಡಿವೆ. ಮೈಸೂರು ರಸ್ತೆಯಲ್ಲಿ ಸುಮಾರು 300 ರಿಂದ 400 ಬಸ್ ಗಳು ಅತಿ ಕಡಿಮೆ ಅವಧಿಯಲ್ಲಿ ಸಂಚರಿಸುತ್ತಿರುವುದರಿಂದ ದಟ್ಟಣೆ ಹೆಚ್ಚಿತ್ತು.
ಪ್ರಯಾಣಿಕರು ವಾಪಸ್ಸಾಗುತ್ತಿರುವುದರಿಂದ ಸೋಮವಾರ ಹಾಗೂ ಮಂಗಳವಾರ ಹೆಚ್ಚುವರಿ ಅವಧಿಗೆ ಕೆಲಸ ಮಾಡಲು ಪೊಲೀಸ್ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ ಎಂದು ಸಂಚಾರ ಪೊಲೀಸ್ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com